ರಾಯಚೂರು: ನಗರದ ಮುನಿಯಪ್ಪ ಮುದ್ದಪ್ಪ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸಂಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಜಿ. ವೀರೇಶ ನಾಯಕ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಎನ್ಎಸ್ಎಸ್ನ ‘ನಾನು ಅಲ್ಲ, ನೀನು’ (Not Me But You) ಎಂಬ ಧ್ಯೇಯವಾಕ್ಯವು ಸ್ವಾರ್ಥಕ್ಕಿಂತ ಸಮಾಜದ ಹಿತಕ್ಕೆ ಆದ್ಯತೆ ನೀಡಿ ಸೇವೆ ಸಲ್ಲಿಸುವ ಮಹತ್ವದ ಸಂದೇಶವನ್ನು ನೀಡುತ್ತದೆ. ವಿದ್ಯಾರ್ಥಿಗಳು ಈ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಅಮರೇಶ್ ಪಾಟೀಲ್, ಉಪಾಧ್ಯಕ್ಷ ಅದನಗೌಡ ಪಾಟೀಲ್, ಆಡಳಿತಾಧಿಕಾರಿ ಡಾ. ಮಂಜುನಾಥ ಪಾಟೀಲ್ ವಟಗಲ್, ಶರಣಬಸವ ಪಾಟೀಲ್, ಮಂಜುನಾಥ ಎನ್. ಹೊಸೂರು, ಎನ್ಎಸ್ಎಸ್ ಅಧಿಕಾರಿ, ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



