ರಾಯಚೂರು: ವಿದ್ಯಾರ್ಥಿ ಜೀವನವು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿನಿಯರು ಈ ಹಂತವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಪಷ್ಟ ಗುರಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಡಾ. ಎ. ಚನ್ನಪ್ಪ ಕೆಎಎಸ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ವಿವಿಧ ಚಟುವಟಿಕೆಗಳ ಉದ್ಘಾಟನೆ ಹಾಗೂ ಬಿ.ಎ., ಬಿ.ಕಾಂ., ಬಿ.ಎಸ್ಸಿ. ಮತ್ತು ಬಿ.ಸಿ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪದವಿ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿನಿಯರು ಜ್ಞಾನವನ್ನು ವಿಸ್ತರಿಸಿಕೊಳ್ಳುವುದರ ಜೊತೆಗೆ ಭವಿಷ್ಯದ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು. ಸಮಯದ ಸದ್ಬಳಕೆ, ನಿರಂತರ ಜ್ಞಾನಾರ್ಜನೆ ಮತ್ತು ಪರಿಶ್ರಮ ಯಶಸ್ಸಿನ ಪ್ರಮುಖ ಸಾಧನಗಳಾಗಿವೆ. ಪದವಿ ಶಿಕ್ಷಣದೊಂದಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಂಡು ಆರಂಭಿಕ ಹಂತದಿಂದಲೇ ಸಿದ್ಧತೆ ನಡೆಸಬೇಕು. ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳಿದ್ದು, ಅವುಗಳನ್ನು ಪಡೆದುಕೊಳ್ಳಲು ಆತ್ಮವಿಶ್ವಾಸದಿಂದ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿ ಭಾಗವಹಿಸಿದ್ದ ಚಿಕಲ್ಪರ್ವಿಯ ಶ್ರೀ ರುದ್ರಮುನೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಗಿರಿಧರ್ ಪೂಜಾರ ಮಾತನಾಡಿ, ವಿದ್ಯಾರ್ಥಿ ಜೀವನ ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಹಂತವಾಗಿದೆ. ಉತ್ತಮ ಸಂಸ್ಕಾರ, ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ಸತತ ಪರಿಶ್ರಮವನ್ನು ರೂಢಿಸಿಕೊಳ್ಳಬೇಕು. ತಂದೆ-ತಾಯಿಯ ತ್ಯಾಗ ಮತ್ತು ನಿರೀಕ್ಷೆಗಳನ್ನು ಗೌರವಿಸಿ, ತಪ್ಪು ದಾರಿಗೆ ಒಳಗಾಗದೆ ಗುರಿಯತ್ತ ಸಾಗಬೇಕು ಎಂದರು. ಇದೇ ವೇಳೆ ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು ಹಾಗೂ ನಿರಂತರ ಓದುವ ಅಭ್ಯಾಸದ ಕುರಿತು ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ಪ್ರಥಮ ವರ್ಷದ ವಿದ್ಯಾರ್ಥಿನಿಯರನ್ನು ಸ್ವಾಗತಿಸಿ, ಕಾಲೇಜಿನಲ್ಲಿ ದೊರೆಯುವ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಇತರ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಶಿಸ್ತು, ಸಂಸ್ಕಾರ, ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸಾಂಸ್ಕೃತಿಕ ಘಟಕದ ಸಂಚಾಲಕ ಡಾ. ಪ್ರಸನ್ನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, 2026-27ನೇ ಸಾಲಿನಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಿರುವ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಮತ್ತು ವಿದ್ಯಾರ್ಥಿ ಅಭಿವೃದ್ಧಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ಜ್ಯೋತಿ ಸಿ.ಕೆ., ಸಹ ಸಂಯೋಜಕ ಶರಣಗೌಡ ಕೆ., ಸಿಬ್ಬಂದಿ ಕಾರ್ಯದರ್ಶಿ ಡಾ. ಸೈಯದ್ ರಶೀದಾ ಪರ್ವೀನ್, ಡಾ. ಸಂತೋಷ್ ಕುಮಾರ್, ರಂಗನಾಥ್ ಬಿಲ್ಲಾರ್, ಡಾ. ಸ್ವರೂಪ ರಾಣಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಉಮಾದೇವಿ, ಸುಮಿತ್ರ ಪ್ಯಾಟಿ, ಡಾ. ಸುರೇಶ ಶರಣಪ್ಪ, ಸರಸ್ವತಿ, ಡಾ. ಚೆನ್ನಬಸವ, ಡಾ. ಅಸ್ಮಾ ಸೇರಿದಂತೆ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸುಚಿತ್ರ ನಿರೂಪಿಸಿದರು, ಸೌಜನ್ಯ ಪ್ರಾರ್ಥಿಸಿದರು, ಸಾನಿಯಾ ಸ್ವಾಗತಿಸಿ, ನಾಗಮ್ಮ ವಂದಿಸಿದರು.



