ರಾಯಚೂರು: ರಾಯಚೂರು ರಿಪೋರ್ಟರ್ಸ್ ಗಿಲ್ಡ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಕೇರಂ ಕ್ರೀಡಾಕೂಟಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ ಹಾಗೂ ನಿಕಟಪೂರ್ವ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಚಾಲನೆ ನೀಡಿದರು.
ನಗರದ ಪತ್ರಿಕಾ ಭವನದ ಮೇಲ್ಮಹಡಿ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಚೀಟಿ ಎತ್ತುವ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಕೇರಂ ಆಡುವ ಮೂಲಕ ಪಂದ್ಯಾವಳಿಗೆ ಅಧಿಕೃತ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ನಾಗಡದಿನ್ನಿ, ನಿತ್ಯವೂ ಸುದ್ದಿ ಸಂಗ್ರಹ ಹಾಗೂ ವರದಿಗಾರಿಕೆಯಲ್ಲಿ ನಿರತರಾಗಿರುವ ಪತ್ರಕರ್ತರಿಗೆ ಇಂತಹ ಕ್ರೀಡಾಕೂಟಗಳು ಹೊಸ ಉತ್ಸಾಹ ಮತ್ತು ಸ್ಫೂರ್ತಿ ತುಂಬುತ್ತವೆ. ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ರಿಪೋರ್ಟರ್ಸ್ ಗಿಲ್ಡ್ ವಿವಿಧ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಶಿವಮೂರ್ತಿ ಹಿರೇಮಠ ಮಾತನಾಡಿ, ಬೆಳ್ಳಿ ಮಹೋತ್ಸವದ ಅಂಗವಾಗಿ ಕೇವಲ ಪತ್ರಕರ್ತರಿಗೆ ಮಾತ್ರವಲ್ಲದೆ ಪದವಿ ವಿದ್ಯಾರ್ಥಿಗಳಿಗೂ ವಿವಿಧ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಪತ್ರಕರ್ತರು ತಮ್ಮ ವೃತ್ತಿಪರ ಒತ್ತಡದ ನಡುವೆಯೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸಕ್ರಿಯತೆಗೆ ಸಹಕಾರಿಯಾಗುತ್ತದೆ. ಪತ್ರಕರ್ತರು ನಡೆದು ಬಂದ ಹಾದಿಯನ್ನು ನೆನಪಿಸುವ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಬೆಳ್ಳಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ್ ಮಾತನಾಡಿ, ಸದಾ ಸುದ್ದಿಯ ಹುಡುಕಾಟದಲ್ಲಿ ಕಾರ್ಯನಿರತರಾಗಿರುವ ಪತ್ರಕರ್ತರಲ್ಲಿ ಉತ್ಸಾಹ ಮೂಡಿಸಲು ಇಂತಹ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗುತ್ತವೆ. ನಗರದ ಎಲ್ಲ ಪತ್ರಕರ್ತರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಗಿಲ್ಡ್ನ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ರೀಡಾ, ಸಾಂಸ್ಕೃತಿಕ ಹಾಗೂ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪತ್ರಕರ್ತರು ಕ್ರೀಡಾಸ್ಫೂರ್ತಿಯಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಬಳಿಕ ನಗರದ ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಕೇರಂ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಗಿಲ್ಡ್ ಕಾರ್ಯದರ್ಶಿ ವೆಂಕಟೇಶ ಹೂಗಾರ, ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರ, ರಾಚಯ್ಯಸ್ವಾಮಿ, ಮಂಜುನಾಥ ಸಾಲಿ, ಆನಂದ ವಿ.ಕೆ., ಗುರುರಾಜಗೌಡ, ಜಯಕುಮಾರ ದೇಸಾಯಿ, ಭೀಮೇಶ, ಅಬ್ದುಲ್ ಖಾದರ, ಜಿಲಾನಿ, ರಾಜು, ಸುರೇಶ ಸ್ವಾಮಿ, ರವಿ ದಾದಸ, ನಾಗರಾಜ್, ಶ್ರೀನಿವಾಸ ಇನಾಂದಾರ, ಮಲ್ಲಪ್ಪ ಸಾಹುಕಾರ್ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.



