ರಾಯಚೂರು: ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಹೆಚ್.ಸಿ.ಎಂ.ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ 2026–27ನೇ ಸಾಲಿನ ಅಂತರ್ ಕಾಲೇಜು ಮಟ್ಟದ ಪುರುಷ ಮತ್ತು ಮಹಿಳಾ ಚೆಸ್ ಪಂದ್ಯಾವಳಿ ಹಾಗೂ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಮಾತನಾಡಿ, ಚದುರಂಗವು ಕೇವಲ ಕ್ರೀಡೆಯಾಗಿರದೆ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸುವ ಮಹತ್ವದ ಆಟವಾಗಿದೆ. ಚೆಸ್ ಆಡುವುದರಿಂದ ಏಕಾಗ್ರತೆ, ತಾಳ್ಮೆ, ಯೋಚನಾ ಶಕ್ತಿ ಹಾಗೂ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಪಂದ್ಯಾವಳಿಯ ಮುಖ್ಯ ನಿರ್ಣಾಯಕರಾಗಿ ಆಗಮಿಸಿದ್ದ ಶ್ರೀ ವರ್ಧಮಾನ್ ಶಾಲೆಯ ದೈಹಿಕ ಶಿಕ್ಷಕ ಹನುಮಂತ ಅವರು, ಚದುರಂಗದ ನಿಯಮಗಳು, ಆಟದ ತಂತ್ರಗಾರಿಕೆ ಹಾಗೂ ಸ್ಪರ್ಧಿಗಳು ಗಮನಿಸಬೇಕಾದ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು. ಉತ್ತಮ ಪ್ರದರ್ಶನ ನೀಡಲು ಏಕಾಗ್ರತೆ, ತಾಳ್ಮೆ ಹಾಗೂ ಪೂರ್ವಯೋಜನೆ ಅತ್ಯಂತ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಮಂಜುನಾಥ್ ಪಾಟೀಲ್ ವೋಟ್ಗಲ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಚದುರಂಗದಂತಹ ಬೌದ್ಧಿಕ ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಚಿಂತನಾ ಸಾಮರ್ಥ್ಯ, ಆತ್ಮವಿಶ್ವಾಸ, ಸಮಯಪ್ರಜ್ಞೆ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಬೆಳೆಸುತ್ತವೆ. ಈ ಪಂದ್ಯಾವಳಿಯ ಮೂಲಕ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಪುರುಷ ಮತ್ತು ಮಹಿಳಾ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ಚದುರಂಗದ ಬೋರ್ಡ್‌ನಲ್ಲಿ ತಮ್ಮ ಕೌಶಲ್ಯ ಹಾಗೂ ತಂತ್ರಗಾರಿಕೆಯನ್ನು ಪ್ರದರ್ಶಿಸಿದರು. ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗುರುತಿಸಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ತಂಡಕ್ಕೆ ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಾಯಿತು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ತಾಯಮ್ಮ, ಸಂಪತ್ ಅಂಗಡಿ, ಭೀಮಪ್ಪ, ಹೆಚ್.ಸಿ.ಎಂ.ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಶಶಿಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.