ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜು) ಬುಧವಾರ ನೂತನ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೋಶದ ಉದ್ಘಾಟನಾ ಸಮಾರಂಭ ನಡೆಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಲ್ಲಿ ಸಂಶೋಧನಾ ಮನೋಭಾವ ಬೆಳೆಸುವುದು, ನಾವೀನ್ಯತೆಗೆ ಉತ್ತೇಜನ ನೀಡುವುದು ಹಾಗೂ ಅಂತರಶಿಸ್ತೀಯ ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಕಾಲೇಜಿನಲ್ಲಿ ನೂತನ ಆರ್ ಅಂಡ್ ಡಿ ಕೋಶವನ್ನು ಸ್ಥಾಪಿಸಲಾಗಿದೆ.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಅವರು ಕೋಶವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧನೆಗೆ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ಪಠ್ಯಕ್ರಮದ ಅಧ್ಯಯನಕ್ಕೆ ಮಾತ್ರ ಸೀಮಿತವಾಗದೆ ಹೊಸ ವಿಷಯಗಳ ಅನ್ವೇಷಣೆ, ವೈಜ್ಞಾನಿಕ ಚಿಂತನೆ ಹಾಗೂ ನಾವೀನ್ಯತೆಯತ್ತ ಗಮನಹರಿಸಬೇಕು ಎಂದು ಹೇಳಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಚಟುವಟಿಕೆಗಳು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಯಂಕಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಆರ್ ಅಂಡ್ ಡಿ ಕೋಶದ ನಿರ್ದೇಶಕ ಡಾ. ಎಂ. ರವಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಶ ಸ್ಥಾಪನೆಯ ಉದ್ದೇಶ ಹಾಗೂ ಮುಂದಿನ ಸಂಶೋಧನಾ ಚಟುವಟಿಕೆಗಳ ಕುರಿತು ವಿವರಿಸಿದರು. ಉಪನಿರ್ದೇಶಕ ಡಾ. ರಾಘವೇಂದ್ರ ಅವರು ಆರ್ ಅಂಡ್ ಡಿ ಕೋಶದ ಕಾರ್ಯವೈಖರಿ ಹಾಗೂ ಅದರ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ದೊರೆಯಲಿರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಪ್ರೊ. ಯಂಕಣ್ಣ ಅವರು, ಮುಂಬರುವ ದಿನಗಳಲ್ಲಿ ಆರ್ ಅಂಡ್ ಡಿ ಕೋಶವು ಕಾಲೇಜಿನ ಶೈಕ್ಷಣಿಕ ಹಾಗೂ ಸಂಶೋಧನಾ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯದ ನಡುವಿನ ಒಡಂಬಡಿಕೆ ಹಾಗೂ ಪರಸ್ಪರ ಸಹಕಾರದಿಂದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನಾ ಕ್ಷೇತ್ರದಲ್ಲಿ ಹಲವು ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್ ಡಾ. ಸೋಮನಾಥರೆಡ್ಡಿ ಸಿ. ಪಾಟೀಲ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಶಿವರಾಜಕುಮಾರ್ ಸ್ವಾಗತಿಸಿದರು. ಬಿಸಿಎ ವಿದ್ಯಾರ್ಥಿನಿ ಸಿಂಧು ಪ್ರಾರ್ಥನಾ ಗೀತೆ ಹಾಡಿದರು. ಶಿಲ್ಪಕಲಾ ಕಾರ್ಯಕ್ರಮ ನಿರೂಪಿಸಿದರು. ಐಕ್ಯುಎಸಿ (IQAC) ಸಂಯೋಜಕ ಡಾ. ಮಹಾಂತೇಶ್ ವಿ. ಅಂಗಡಿ ವಂದಿಸಿದರು.



