ರಾಯಚೂರು, ಸೆ.26: ಭಾರತೀಯ ದಲಿತ ಪ್ಯಾಂಥರ್ಸ್ ಸಂಘಟನೆಯ ರಾಯಚೂರು ಜಿಲ್ಲಾ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ವೆಂಕಟೇಶ್ ಅರೋಲಿಕರ್ ನೇಮಕಗೊಂಡಿದ್ದಾರೆ.
ನಗರದ ಸರ್ಕಾರಿ ನೌಕರರ ಭವನದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆರ್. ತಿಮ್ಮಾರೆಡ್ಡಿ ಅವರ ಉಪಸ್ಥಿತಿಯಲ್ಲಿ ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಜಾನೇಕಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಉಪಾಧ್ಯಕ್ಷರಾಗಿ ನರಸಪ್ಪ ವಕೀಲರು ಚಿಂಚೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ್ ನಂದಿಹಾಳ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಣ್ ಜಾನೇಕಲ್, ಹನುಮಂತು ಉದ್ಬಾಳ್, ಗಣೇಶ್ ಕುರ್ಡಿ ಮತ್ತು ಬಸವರಾಜ ನೀರಭಾವಿಕುಂಟಾ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿಯು ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಆರ್. ತಿಮ್ಮಾರೆಡ್ಡಿ, ರಾಯಚೂರು ಜಿಲ್ಲಾ ಘಟಕಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ನೂತನ ಸಮಿತಿ ರಚಿಸಲಾಗಿದೆ. ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ರಾಜ್ಯ ಸಮಿತಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ದಲಿತರು ಹಾಗೂ ಶೋಷಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹತ್ಯೆ ಸೇರಿದಂತೆ ವಿವಿಧ ರೀತಿಯ ಅನ್ಯಾಯಗಳ ವಿರುದ್ಧ ಸಂಘಟನೆಯು ಧ್ವನಿ ಎತ್ತಬೇಕು. ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಸಾಮಾಜಿಕ ನ್ಯಾಯದ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಪ್ರತಿಯೊಂದು ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಭಾರತೀಯ ದಲಿತ ಪ್ಯಾಂಥರ್ಸ್ ಸಂಘಟನೆಯನ್ನು ಬಲಪಡಿಸಬೇಕು. ಯಾವುದೇ ಅನ್ಯಾಯ ನಡೆದಾಗ ಸಂಘಟನೆಯ ಪದಾಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಶೋಷಿತರ ಪರವಾಗಿ ನಿಲ್ಲಬೇಕು. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.
ನೂತನ ಜಿಲ್ಲಾಧ್ಯಕ್ಷ ವೆಂಕಟೇಶ್ ಅರೋಲಿಕರ್ ಅವರಿಗೆ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡುವಂತೆ ತಿಮ್ಮಾರೆಡ್ಡಿ ಮನವಿ ಮಾಡಿದರು.
ಸಭೆಯಲ್ಲಿ ಜಗನ್ನಾಥ ಸುಂಕಾರಿ, ವೆಂಕಟಸ್ವಾಮಿ, ಆಂಜನೇಯ ಗೋಡಿಹಾಳ, ದೇವೇಂದ್ರ ದಾದಸ್, ಶ್ರೀನಿವಾಸ್ ಮಾಚರ್ಲಾ, ಈರಣ್ಣ ಗೋರಂಟಲಿ, ಗಿರಿಯಪ್ಪ ನೆಲಹಾಳ, ಶೇಖರ ರಾಂಪೂರಿ, ಹನುಮಂತು ಉದ್ಬಾಳ್, ಹನುಮಂತು ಸೀಕಲ್, ಕಾಶಿನಾಥ್ ಕುರ್ಡಿ, ಶ್ರೀನಿವಾಸ್ ನಂದಿಹಾಳ್, ಹನುಮಂತು ಬಯಲು ಮರ್ಚೆಡ್, ನರಸಿಂಹಲು ಸೀಕಲ್, ಈಶಪ್ಪ ವಕೀಲರು ಬೈಲ್ ಮರ್ಚೆಡ್, ಶರಣಪ್ಪ ದಿನ್ನಿ, ಮಲ್ಲೇಶಪ್ಪ ಅಮರೇಶ್ವರ್ ಕ್ಯಾಂಪ್, ಈರಣ್ಣ ಕುರ್ಡಿ, ನರಸಿಂಹಲು ಕುರ್ಡಿ, ನರಸಿಂಹಲು ರಾಂಪೂರು, ಹನುಮಂತು ಅರೋಲಿ, ಬಸವರಾಜ ಅರೋಲಿಕರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.



