ರಾಯಚೂರು, ಸೆ.26: ತಾಲೂಕಿನ ಅತಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ. ರಾಮಪುರ ಗ್ರಾಮದ ಯನ್ಮಲ್ ಕ್ಯಾಂಪ್ನಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಮನೆ ಮನೆಗೆ ಭೇಟಿ ನೀಡಿ ಶೌಚಾಲಯಗಳ ಬಳಕೆ ಹಾಗೂ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯದಲ್ಲಿ ಸಮೀಕ್ಷಾ ತಂಡವು ಪ್ರತಿ ಮನೆಗೆ ತೆರಳಿ ಶೌಚಾಲಯ ಸೌಲಭ್ಯವಿದೆಯೇ, ಅವು ಬಳಕೆಯಲ್ಲಿವೆಯೇ ಅಥವಾ ಬಳಕೆಯಾಗದೆ ಉಳಿದಿವೆಯೇ ಎಂಬುದನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ದಾಖಲಿಸಿತು.
ಇದೇ ವೇಳೆ ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆ ಕಾಪಾಡುವಲ್ಲಿ ಶೌಚಾಲಯಗಳ ನಿಯಮಿತ ಬಳಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗ್ರಾಮಸ್ಥರಿಗೆ ತಿಳಿಸಲಾಯಿತು. ಬಯಲು ಶೌಚದಿಂದ ಉಂಟಾಗಬಹುದಾದ ಅನೈರ್ಮಲ್ಯವನ್ನು ತಪ್ಪಿಸಿ, ಕುಟುಂಬ ಹಾಗೂ ಸಮುದಾಯದ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ಶೌಚಾಲಯ ಬಳಕೆಗೆ ಆದ್ಯತೆ ನೀಡಬೇಕು ಎಂಬ ಅರಿವು ಮೂಡಿಸಲಾಯಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮದ ತಂಡವೂ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಂದಿಗೆ ಸಮೀಕ್ಷೆಯಲ್ಲಿ ಪಾಲ್ಗೊಂಡು, ಶೌಚಾಲಯಗಳ ಸಮರ್ಪಕ ಬಳಕೆ ಮತ್ತು ಸ್ವಚ್ಛತೆ ಕುರಿತು ಸಮುದಾಯದ ಜನರಿಗೆ ಮಾಹಿತಿ ನೀಡಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲತೀಫ್, ಬಿಲ್ ಕಲೆಕ್ಟರ್ ಚನ್ನಪ್ಪ, ಅತಕೂರು ನೀರುಗಂಟಿ ಮಹಾದೇವ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮ ಸಂಯೋಜಕ ವಿನಾಯಕ್ ಆರ್., ಕ್ಷೇತ್ರ ಪಾಲಕ ಲಿಂಗಪ್ಪ ಹಾಗೂ ಸಮುದಾಯದ ಮಹಿಳೆಯರು ಭಾಗವಹಿಸಿದ್ದರು.



