ರಾಯಚೂರು: ಕರ್ನಾಟಕ ಸರ್ಕಾರದ ಪದವಿಪೂರ್ವ ಶಿಕ್ಷಣ ಇಲಾಖೆ, ರಾಯಚೂರು ಹಾಗೂ ನಗರದ ಶ್ರೀ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದಿದ್ದು, ತಾರಾನಾಥ ಶಿಕ್ಷಣ ಸಂಸ್ಥೆ ಸಂಚಾಲಿತ ಚನ್ನಬಸಮ್ಮ ಎಂ. ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ.

ಸೆ.24ರಂದು ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಜಾನಪದ ನೃತ್ಯ ಹಾಗೂ ಆಂಗ್ಲ ಭಾಷೆಯ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದರು.

ಪ್ರಥಮ ಪಿಯುಸಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಾದ ಕು. ಜಾಮೀನ, ಕು. ಅಕ್ಷಿತಾ ಕೆ. ಹಾಗೂ ಸಂಗಡಿಗರು ‘ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ’ ಹಾಡಿಗೆ ಆಕರ್ಷಕ ಜಾನಪದ ನೃತ್ಯ ಪ್ರದರ್ಶಿಸಿ ಪ್ರಥಮ ಬಹುಮಾನ ಪಡೆದುಕೊಂಡರು.

ಪ್ರಥಮ ಪಿಯುಸಿ ವಿಭಾಗದ ಆಂಗ್ಲ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ಕು. ಸುಹಾಸಿನಿ ದ್ವಿತೀಯ ಸ್ಥಾನ ಪಡೆದರೆ, ದ್ವಿತೀಯ ಪಿಯುಸಿ ವಿಭಾಗದ ಆಂಗ್ಲ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ಕು. ಶಿರೀಷ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಪಾರಮಸಲ್ ಸುಖಾಣಿ, ಅಧ್ಯಕ್ಷ ಪವನ್ ಕುಮಾರ್ ಸುಖಾಣಿ, ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್ ವಕೀಲರು, ಕಾಲೇಜಿನ ಚೇರ್‌ಮನ್ ಬಸ್ಸಪ್ಪ ತಿಪ್ಪಾರೆಡ್ಡಿ, ಕಾರ್ಯದರ್ಶಿ ಮಲ್ಲಿಕಾರ್ಜುನ ವಕೀಲರು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಲೇಜಿನ ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಜಯಶಾಲಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಮುಂದಿನ ಹಂತದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ, ಜ್ಞಾನಗಂಗಾ ಕಾಲೇಜಿನ ಪ್ರಾಚಾರ್ಯ ರಾಜಶ್ರೀನಿವಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.