ರಾಯಚೂರು: ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಎಚ್‌ಸಿಎಂಎಸ್‌ಕೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ 2026–27ನೇ ಸಾಲಿನ ಪುರುಷ ಮತ್ತು ಮಹಿಳಾ ವಿಶ್ವವಿದ್ಯಾಲಯ ಮಟ್ಟದ ಚೆಸ್ (ಚದುರಂಗ) ತಂಡದ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ವಿಶ್ವವಿದ್ಯಾಲಯದ ಚೆಸ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ರಾಯಚೂರಿನ ವೀರಶೈವ ಶಿಕ್ಷಣ ಮಹಾವಿದ್ಯಾಲಯದ ಡಾ. ಮಂಜುನಾಥ ಪಾಟೀಲ ಕಾರ್ಯನಿರ್ವಹಿಸಿದರು.

ಆಯ್ಕೆ ಸಮಿತಿಯ ಸದಸ್ಯರಾಗಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಸಂಯೋಜಕ ಮಲ್ಲಿಕಾರ್ಜುನ ಎನ್., ಸಿರವಾರ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜಶೇಖರ, ಎಚ್‌ಸಿಎಂಎಸ್‌ಕೆ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಶಶಿಕುಮಾರ ಹಾಗೂ ವಿವೇಕಾನಂದ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತ ರೆಡ್ಡಿ ಭಾಗವಹಿಸಿದ್ದರು.

ಆಯ್ಕೆ ಪ್ರಕ್ರಿಯೆಯಲ್ಲಿ ಪುರುಷರ ವಿಭಾಗದಿಂದ 52 ವಿದ್ಯಾರ್ಥಿಗಳು ಹಾಗೂ ಮಹಿಳೆಯರ ವಿಭಾಗದಿಂದ 26 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 78 ಸ್ಪರ್ಧಿಗಳು ಭಾಗವಹಿಸಿ ತಮ್ಮ ಚದುರಂಗ ಕೌಶಲ್ಯ ಪ್ರದರ್ಶಿಸಿದರು.

ಆಯ್ಕೆ ಸಮಿತಿಯ ಸದಸ್ಯರು ಸ್ಪರ್ಧಿಗಳ ಆಟವನ್ನು ವೀಕ್ಷಿಸಿ, ಅವರ ಆಟದ ಕೌಶಲ್ಯ, ಸಾಮರ್ಥ್ಯ, ತಾಂತ್ರಿಕ ನೈಪುಣ್ಯ ಹಾಗೂ ಒಟ್ಟಾರೆ ಪ್ರದರ್ಶನವನ್ನು ಪರಿಗಣಿಸಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಅರ್ಹರಾದ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿದರು.

ಅಂತಿಮವಾಗಿ ಆಯ್ಕೆಯಾದ ಪುರುಷ ಮತ್ತು ಮಹಿಳಾ ಆಟಗಾರರ ಅಧಿಕೃತ ಪಟ್ಟಿಯನ್ನು ಸಿದ್ಧಪಡಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಯಿತು. ಇದರೊಂದಿಗೆ 2026–27ನೇ ಸಾಲಿನ ವಿಶ್ವವಿದ್ಯಾಲಯ ಚೆಸ್ ತಂಡದ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತು.