ರಾಯಚೂರು, ಸೆ.27: ತೇರಾಪಂಥ್ ಯುವಕ ಪರಿಷತ್ ರಾಯಚೂರು ಘಟಕದ ವತಿಯಿಂದ ‘ಮೆಗಾ ಬ್ಲಡ್ ಡೊನೇಷನ್ ಡ್ರೈವ್–2026’ ಅಂಗವಾಗಿ ಭಾನುವಾರ ನಗರದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನಗರದ ಪಾರಸ್ ಗಾರ್ಡನ್ನ ತೇರಾಪಂಥ್ ಭವನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ರಿಮ್ಸ್ (RIMS) ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಯುವಕರು ಸೇರಿದಂತೆ ವಿವಿಧ ವಯೋಮಾನದ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು.
‘ಒಂದು ಜೀವ ಉಳಿಸಿ, ರಕ್ತ ನೀಡಿ’ ಎಂಬ ಸಂದೇಶದೊಂದಿಗೆ ಆಯೋಜಿಸಿದ್ದ ಈ ಅಭಿಯಾನದ ಮೂಲಕ ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಎದುರಾದಾಗ ದಾನಿಗಳು ನೀಡುವ ರಕ್ತವು ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗುತ್ತದೆ. ಆದ್ದರಿಂದ ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪರಿಷತ್ ಪದಾಧಿಕಾರಿಗಳು ಕರೆ ನೀಡಿದರು.
ರಕ್ತದಾನದ ಬಗ್ಗೆ ಸಮಾಜದಲ್ಲಿರುವ ಹಿಂಜರಿಕೆ ಹಾಗೂ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ವಿಶೇಷವಾಗಿ ಯುವಜನರಲ್ಲಿ ರಕ್ತದಾನದ ಕುರಿತು ಅರಿವು ಹೆಚ್ಚಿಸುವ ಉದ್ದೇಶದಿಂದ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದರು.
ಈ ಸಂದರ್ಭದಲ್ಲಿ ತೇರಾಪಂಥ್ ಯುವಕ ಪರಿಷತ್ ಅಧ್ಯಕ್ಷ ಓಂಪ್ರಕಾಶ ಅಂಜಳಿಯಾ, ಸದಸ್ಯ ಶಾಂತಿಲಾಲ ನಾಟ, ಮಾಣಿಕಾಚಂದಾ ಮಾರೋಟಿ, ಅಶೋಕ ಲೋಡಾ, ಆನಂದ ಲೋಡಾ, ಮನೀಶ್ ನಾಟ, ಜಿತೇಂದ್ರ ಮಾರೋಟಿ, ಅಮೀತ್ ಲೋಡಾ, ರಾಹುಲ್ ನಾಹರ್, ವಿನುತ್ ಮಾರೋಟಿ, ರೋಶನ್ ಮೇತಾ, ತುಷಾರ್ ಮೇತಾ, ಪ್ರತೀಕ್ ಲೋಡ್ಡಾ ಸೇರಿದಂತೆ ಪರಿಷತ್ ಪದಾಧಿಕಾರಿಗಳು, ಸದಸ್ಯರು ಹಾಗೂ ಮಹಿಳಾ ಮಂಡಳಿಯವರು ಉಪಸ್ಥಿತರಿದ್ದರು.



