ರಾಯಚೂರು: ತಾಲೂಕಿನ ಕುರುಬದೊಡ್ಡಿ ಗ್ರಾಮದ ರೈತರಿಗೆ ನಿಗದಿತ ಅವಧಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರೈತರು ವಡವಟಿ ವಿದ್ಯುತ್ ಉಪಕೇಂದ್ರದಲ್ಲಿ ರಾತ್ರಿಯಿಡೀ ಕಾದು ಆಕ್ರೋಶ ವ್ಯಕ್ತಪಡಿಸಿದರು.

ಬೆಳೆಗಳಿಗೆ ನೀರು ಹಾಯಿಸಲು ಅಗತ್ಯವಿರುವ ಸಮಯದಲ್ಲಿ ವಿದ್ಯುತ್ ದೊರೆಯದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಧರಣಿ ನಡೆಸಲು ಮುಂದಾಗಿದ್ದರು. ಈ ವೇಳೆ ರಾಯಚೂರು ನಗರ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯನ್ನು ಗಮನಕ್ಕೆ ತರಲಾಯಿತು.

ರೈತರ ಅಹವಾಲಿಗೆ ಸ್ಪಂದಿಸಿದ ಶಾಸಕರು ಮಧ್ಯರಾತ್ರಿಯಲ್ಲೇ ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಳಿಕ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಮಾಡಲಾಯಿತು ಎಂದು ರೈತರು ತಿಳಿಸಿದ್ದಾರೆ.

ರೈತರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಡಾ. ಶಿವರಾಜ್ ಪಾಟೀಲ್, ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧವಿದ್ದು, ಅಗತ್ಯವಾದರೆ ಅವರ ನ್ಯಾಯಯುತ ಹೋರಾಟಕ್ಕೂ ಬೆಂಬಲ ನೀಡುವುದಾಗಿ ಭರವಸೆ ನೀಡಿದರು ಎಂದು ರೈತರು ಹೇಳಿದ್ದಾರೆ.

ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ಅವಧಿಯಲ್ಲಿಯೂ ನಿರಂತರವಾಗಿ ವಿದ್ಯುತ್ ದೊರೆಯದಿರುವುದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಸಂಕಷ್ಟದ ಸಂದರ್ಭದಲ್ಲಿ ಸಮಸ್ಯೆಗೆ ಸ್ಪಂದಿಸಿ ಅಧಿಕಾರಿಗಳೊಂದಿಗೆ ಮಾತನಾಡುವ ಮೂಲಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಅವರಿಗೆ ಕುರುಬದೊಡ್ಡಿ ಗ್ರಾಮದ ರೈತರು ಕೃತಜ್ಞತೆ ಸಲ್ಲಿಸಿದ್ದಾರೆ.