ರಾಯಚೂರು, ಸೆ.27: ನಗರದ ರಾಯಲ್ ಕಾಟನ್ ಇಂಡಸ್ಟ್ರೀಸ್ ಸಂಸ್ಥಾಪಕ-ಮಾಲೀಕ ಸಯೀದುದ್ದೀನ್ ಅಹ್ಮದ್ ಅವರ ಪುತ್ರಿ ಡಾ. ಶಿರೀನ್ ಫಾತಿಮಾ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು) ಪಿಎಚ್‌ಡಿ ಪದವಿ ಪಡೆದು ರಾಯಚೂರಿಗೆ ಕೀರ್ತಿ ತಂದಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನೆ ನಡೆಸಿರುವ ಅವರು, “EEG Signal Analysis Using Machine Learning for Sleep Apnea” ವಿಷಯದ ಕುರಿತು ಪ್ರಬಂಧ ಮಂಡಿಸಿದ್ದಾರೆ. ಅವರ ಪಿಎಚ್‌ಡಿ ವೈವಾ-ವೋಸ್ ಪರೀಕ್ಷೆ 2026ರ ಆಗಸ್ಟ್ 6ರಂದು ಯಶಸ್ವಿಯಾಗಿ ನಡೆದಿದ್ದು, ಸೆಪ್ಟೆಂಬರ್ 26ರಂದು ನಡೆದ ವಿಟಿಯು 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವಕ್ಕೆ ಕರ್ನಾಟಕದ ರಾಜ್ಯಪಾಲ ಹಾಗೂ ವಿಟಿಯು ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ವಿಟಿಯು ಉಪಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ಪರೀಕ್ಷಾಂಗ ಕುಲಸಚಿವ ಡಾ. ಉಜ್ವಲ್ ಯು.ಜೆ. ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಡಾ. ಶಿರೀನ್ ಫಾತಿಮಾ ಅವರು ರಾಯಚೂರಿನ ಎಸ್‌ಎಲ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಬಿ.ಇ. ಪದವಿ ಪೂರ್ಣಗೊಳಿಸಿದ್ದು, ಬಳಿಕ ಬೆಂಗಳೂರಿನ ಎಚ್‌ಕೆಬಿಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.

2012–14ನೇ ಶೈಕ್ಷಣಿಕ ಸಾಲಿನ ಎಂ.ಟೆಕ್ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದು ವಿಟಿಯು ಚಿನ್ನದ ಪದಕಕ್ಕೂ ಭಾಜನರಾಗಿದ್ದರು. ಬೆಳಗಾವಿಯಲ್ಲಿ ನಡೆದ ವಿಟಿಯು 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗಿತ್ತು.

ಡಾ. ಮಾಜ್ ಅಹ್ಮದ್ ಅವರ ಮಾರ್ಗದರ್ಶನದಲ್ಲಿ, ಬೆಂಗಳೂರಿನ ಎಚ್‌ಕೆಬಿಕೆ ಎಂಜಿನಿಯರಿಂಗ್ ಕಾಲೇಜನ್ನು ಸಂಶೋಧನಾ ಕೇಂದ್ರವನ್ನಾಗಿ ಮಾಡಿಕೊಂಡು ಅವರು ಪಿಎಚ್‌ಡಿ ಸಂಶೋಧನೆ ಪೂರ್ಣಗೊಳಿಸಿದ್ದಾರೆ. ಅವರ ಸಂಶೋಧನಾ ಕಾರ್ಯದ ಫಲವಾಗಿ ಅಂತಾರಾಷ್ಟ್ರೀಯ SCIE ಮತ್ತು Scopus ಸೂಚ್ಯಂಕಿತ ಜರ್ನಲ್‌ಗಳಲ್ಲಿ, Q1 ಮತ್ತು Q2 ಜರ್ನಲ್‌ಗಳನ್ನು ಒಳಗೊಂಡಂತೆ ಐದು ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. EEG ಸಿಗ್ನಲ್ ವಿಶ್ಲೇಷಣೆ, ಮೆಷಿನ್ ಲರ್ನಿಂಗ್ ಹಾಗೂ ಸ್ಲೀಪ್ ಅಪ್ನಿಯಾ ಪತ್ತೆ ಮತ್ತು ವಿಶ್ಲೇಷಣೆ ಕ್ಷೇತ್ರಗಳಿಗೆ ಅವರ ಸಂಶೋಧನೆ ಕೊಡುಗೆ ನೀಡಿದೆ.

ಡಾ. ಶಿರೀನ್ ಫಾತಿಮಾ ಅವರ ಈ ಸಾಧನೆಗೆ ಕುಟುಂಬಸ್ಥರು, ಮಾರ್ಗದರ್ಶಕರು, ಶಿಕ್ಷಕರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು, ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಅವರ ಸಾಧನೆ ಪ್ರೇರಣೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.