ರಾಯಚೂರು, ಸೆ.27: ಕನ್ನಡ ಭಾಷೆಯ ಮೇಲಿನ ಅಚಲ ಪ್ರೇಮ ಹಾಗೂ ಕನ್ನಡ ಸಾಹಿತ್ಯದ ಪ್ರಸಾರ-ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ರಾಯಚೂರಿನ ಹಿರಿಯ ಲೇಖಕ ಬಶೀರ್ ಅಹ್ಮದ್ ಹೊಸಮನಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊಸಮನಿ ಪ್ರಕಾಶನ, ರಾಯಚೂರು ಇವರ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಶೀರ್ ಅಹ್ಮದ್ ಹೊಸಮನಿ ಅವರ ಐತಿಹಾಸಿಕ ನಾಟಕ ಕೃತಿ **‘ರಾಷ್ಟ್ರಕೂಟ ಸಾರ್ವಭೌಮರು’** ಜನಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಹಿನ್ನೆಲೆ, ಆ ಕಾಲದಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ದೊರೆತಿದ್ದ ಮನ್ನಣೆ, ಸಾಮ್ರಾಜ್ಯಗಳ ವಿಸ್ತಾರ ಹಾಗೂ ಸಾಂಸ್ಕೃತಿಕ ವೈಭವವನ್ನು ಕೃತಿಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ ಎಂದು ಹೇಳಿದರು. ಕಾವೇರಿಯಿಂದ ನರ್ಮದಾ ನದಿವರೆಗಿನ ವಿಶಾಲ ಭೂಪ್ರದೇಶದ ಇತಿಹಾಸವನ್ನು ಕೃತಿ ಓದುಗರ ಮುಂದೆ ತೆರೆದಿಡುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃತಿಯನ್ನು ಲೋಕಾರ್ಪಣೆ ಮಾಡಿದ ಯುವ ಕವಿ ಹಾಗೂ ಸಾಹಿತಿ ವೇಣು ಜಾಲಿಬೆಂಚಿ ಮಾತನಾಡಿ, ಐತಿಹಾಸಿಕ ನಾಟಕ ರಚನೆ ಸಾಮಾನ್ಯ ಕಥೆ ಅಥವಾ ಕಾವ್ಯ ರಚನೆಗಿಂತ ಹೆಚ್ಚು ಸವಾಲಿನ ಕೆಲಸವಾಗಿದೆ. ನಿರ್ದಿಷ್ಟ ಕಾಲಘಟ್ಟದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಕುರಿತು ಆಳವಾದ ಅಧ್ಯಯನ ಅಗತ್ಯವಿದ್ದು, ಇತಿಹಾಸದ ಸತ್ಯತೆಯನ್ನು ಕಾಪಾಡಿಕೊಂಡೇ ಅದನ್ನು ಕಲಾತ್ಮಕವಾಗಿ ನಿರೂಪಿಸುವುದು ಲೇಖಕರಿಗೆ ದೊಡ್ಡ ಜವಾಬ್ದಾರಿ. ಬಶೀರ್ ಅಹ್ಮದ್ ಹೊಸಮನಿ ಅವರು ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದ ಸಾಹಿತಿ ಸರ್ವಮಂಗಳ ಓತೂರು ಅವರು ಕೃತಿಯ ಪರಿಚಯ ಮಾಡಿಕೊಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ವೀರಹನುಮಾನ್ ಮಾತನಾಡಿ, ಅದಿಲ್ ಶಾಹಿಗಳ ಕಾಲಘಟ್ಟದಲ್ಲಿ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಬದುಕಿಗೆ ದೊರೆತ ಉತ್ತೇಜನದ ಅಂಶಗಳು ಕೃತಿಯಲ್ಲಿ ಗಮನಾರ್ಹವಾಗಿ ಮೂಡಿಬಂದಿವೆ. ಮಹಿಪಾಲ ದಾಸರ ಕುರಿತ ನಾಟಕೀಯ ಪ್ರಸಂಗಗಳು, ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಸಂಬಂಧಿತ ಅಂಶಗಳು ಕೃತಿಗೆ ವಿಶೇಷತೆ ನೀಡಿವೆ. ಒಟ್ಟಾರೆಯಾಗಿ ಈ ನಾಟಕ ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಲೋಕಕ್ಕೆ ಮೌಲ್ಯಯುತ ಸೇರ್ಪಡೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ ಮಾತನಾಡಿ, ಕೃತಿಯಲ್ಲಿ ಸರಳ ಹಾಗೂ ವಿಶಿಷ್ಟ ನಿರೂಪಣಾ ಶೈಲಿ ಕಂಡುಬರುತ್ತದೆ. ‘ಕಟಾಲಿ’, ‘ಉಂಬಾಕ’, ‘ಮೂಳ’ ಮೊದಲಾದ ಗ್ರಾಮೀಣ ಪದಗಳ ಬಳಕೆ ಈ ನೆಲದ ಸೊಗಡನ್ನು ತರುತ್ತದೆ. ಗಾದೆಮಾತುಗಳು, ನವರಸಗಳು, ಸಂಭಾಷಣೆಗಳು ಹಾಗೂ ಸ್ವಗತ ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕವಿ ತಿಮ್ಮಯ್ಯ ರಾಯಚೂರಕರ್, ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದ ಮುಖಂಡ ನಟರಾಜ್ ಪಾಟೀಲ್, ಟಿಪ್ಪು ಸುಲ್ತಾನ್ ಯುವಸೇನೆಯ ಅಧ್ಯಕ್ಷ ಹುಸೇನ್ ಭಾಷಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕೃತಿಕಾರ ಬಶೀರ್ ಅಹ್ಮದ್ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಹೊಸಮನಿ ಪ್ರಕಾಶನದ ಪದಾಧಿಕಾರಿಗಳು, ಸಾಹಿತಿಗಳು ಮತ್ತು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪದಾಧಿಕಾರಿ ವೈಶಾಲಿ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.



