ರಾಯಚೂರು: ನಗರದ ವಿವಿಧ ಗಣೇಶ ಮೂರ್ತಿಗಳನ್ನು ಸಾಮಾನ್ಯವಾಗಿ ಖಾಸಭಾವಿಯಲ್ಲಿ ನೀರು ತುಂಬಿಸಿ ವಿಸರ್ಜಿಸಲಾಗುತ್ತದೆ. ಆದರೆ ಪಟೇಲ್ ರಸ್ತೆಯ ಬಾಲರಾಮ ಶಾಲೆಯ ಶುದ್ಧ ಮಣ್ಣಿನ ಗಣೇಶ ಮೂರ್ತಿಯನ್ನು ಸಂಪ್ರದಾಯದಂತೆ ಬಸನಭಾವಿ ವೃತ್ತದಲ್ಲಿರುವ ಶ್ರೀ ಮಾರುತಿ ದೇವಸ್ಥಾನದ ಹಿಂಭಾಗದ ಪುರಾತನ ಬಾವಿಯಲ್ಲಿ ವಿಸರ್ಜಿಸಲಾಯಿತು.
ಬಾವಿಯಲ್ಲಿ ನೀರಿದ್ದರೂ, ದೀರ್ಘಕಾಲದಿಂದ ಹೂಳೆತ್ತದ ಕಾರಣ ಪ್ಲಾಸ್ಟಿಕ್, ಕಸ-ಕಡ್ಡಿಗಳು ಹಾಗೂ ಇತರೆ ತ್ಯಾಜ್ಯ ತುಂಬಿಕೊಂಡಿದ್ದವು. ವಿಸರ್ಜನೆಗೆ ಬಂದ ಬಾಲರಾಮ ಶಾಲೆಯ ಗಣೇಶ ಸಮಿತಿಯ ಸೇವಕ ಯುವಕರು ತಮ್ಮ ಕೈಯಿಂದಲೇ ಕೊಳಚೆ ನೀರಿನೊಳಗೆ ಇಳಿದು ಪ್ಲಾಸ್ಟಿಕ್ ಹಾಗೂ ಕಸವನ್ನು ತೆರವುಗೊಳಿಸಿದರು.
ಬಾವಿಯಲ್ಲಿ ಲಭ್ಯವಿದ್ದ ನೀರಿನಲ್ಲೇ ಗಣೇಶ ಮೂರ್ತಿಯನ್ನು ವಿಸರ್ಜಿಸಿದ ಬಳಿಕ, ಮೂರ್ತಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವಂತೆ ಟ್ಯಾಂಕರ್ ಮೂಲಕ ನೀರು ತರಿಸಿ ಪೈಪ್ಗಳಿಂದ ಬಾವಿಗೆ ಹರಿಸಲಾಯಿತು.
ಪುರಾತನ ಮಹತ್ವ ಹೊಂದಿರುವ ಈ ಬಾವಿಯನ್ನು ಮಹಾನಗರ ಪಾಲಿಕೆ ಸಮರ್ಪಕವಾಗಿ ಹೂಳೆತ್ತಿ ಸ್ವಚ್ಛಗೊಳಿಸಿದರೆ, ಸಾರ್ವಜನಿಕ ಬಳಕೆಗೆ ನೀರು ಲಭ್ಯವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಬಾವಿಯ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಪಾಲಿಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.



