ರಾಯಚೂರು, ಸೆ.28: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ, ತಾತ್ಕಾಲಿಕ ಸಿಬ್ಬಂದಿ ನೇಮಕ, ಹೆಚ್ಚುವರಿ ಹುದ್ದೆಗಳ ಜವಾಬ್ದಾರಿ ಹಂಚಿಕೆ ಹಾಗೂ ಹಣಕಾಸು ನಿರ್ವಹಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿ ಆ.7ರಂದು ಸಲ್ಲಿಸಿದ ಮನವಿಗೆ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹೋರಾಟ ಸಮಿತಿ ಅಧ್ಯಕ್ಷ ರವಿಗೌಡ ಮೀರಾಪೂರು ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ವಿರುದ್ಧ ನಡೆಸುತ್ತಿರುವ ಹೋರಾಟ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಎಲ್ಲ ಪ್ರಕ್ರಿಯೆಗಳು ನಿಯಮಬದ್ಧವಾಗಿ ನಡೆದಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಿ ಸಾರ್ವಜನಿಕರ ಮುಂದಿರುವ ಅನುಮಾನಗಳಿಗೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.

ವಿಟಿಯು ಅಭಿವೃದ್ಧಿಪಡಿಸಿರುವ ಒಡೆಸ್ ವ್ಯವಸ್ಥೆಯನ್ನು ಬಳಸುವ ಬದಲು ಖಾಸಗಿ ಸಂಸ್ಥೆಗೆ ಡಿಜಿಟಲ್ ಮೌಲ್ಯಮಾಪನದ ಹೊಣೆ ನೀಡಿರುವ ಬಗ್ಗೆ ಸ್ಪಷ್ಟನೆ ಅಗತ್ಯವಿದೆ. ಅಲ್ಲದೆ, 13 ತಾತ್ಕಾಲಿಕ ಹುದ್ದೆಗಳಿಗೆ ಸಿಬ್ಬಂದಿ ನೇಮಿಸಿ ₹40 ಸಾವಿರದಿಂದ ₹50 ಸಾವಿರದವರೆಗೆ ವೇತನ ನಿಗದಿಪಡಿಸಲಾಗಿದೆ ಎಂಬ ಆರೋಪವಿದೆ. ತಾಂತ್ರಿಕ ಹಾಗೂ ಹಣಕಾಸಿನಂತಹ ಮಹತ್ವದ ಜವಾಬ್ದಾರಿಗಳನ್ನು ಸೂಕ್ತ ಅರ್ಹತೆ ಮತ್ತು ಅನುಭವ ಹೊಂದಿರದವರಿಗೆ ವಹಿಸಲಾಗಿದೆ ಎಂಬ ಆರೋಪಗಳಿಗೂ ವಿಶ್ವವಿದ್ಯಾಲಯ ಆಡಳಿತ ಉತ್ತರಿಸಬೇಕು ಎಂದರು.

ತಾತ್ಕಾಲಿಕ ಸಿಬ್ಬಂದಿಯ ನೇಮಕಾತಿ ಆದೇಶಗಳು, ಹಣಕಾಸು ಸಮಿತಿ ಹಾಗೂ ಸಿಂಡಿಕೇಟ್ ಸಭೆಗಳ ನಿರ್ಣಯಗಳು, ನೇಮಕಗೊಂಡವರ ವಿದ್ಯಾರ್ಹತೆ ಮತ್ತು ಅನುಭವದ ದಾಖಲೆಗಳು, ಟೆಂಡರ್ ಪ್ರಕ್ರಿಯೆಯ ವಿವರ, ವೇತನ ಪಾವತಿ ಮಾಹಿತಿ, ಪಿಎಫ್–ಇಎಸ್‌ಐಗೆ ಸಂಬಂಧಿಸಿದ ದಾಖಲೆಗಳು ಹಾಗೂ ಆಡಿಟ್ ಆಕ್ಷೇಪಣೆಗಳ ಪ್ರತಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಒಬ್ಬರಿಗೇ ಹಲವು ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿರುವುದು ಮತ್ತು ಬೋಧನಾ ಸಿಬ್ಬಂದಿಯನ್ನು ಆಡಳಿತಾತ್ಮಕ ಕಾರ್ಯಗಳಿಗೆ ನಿಯೋಜಿಸಿರುವ ಬಗ್ಗೆಯೂ ಪರಿಶೀಲನೆ ನಡೆಯಬೇಕು. ತಾಂತ್ರಿಕ ಹಾಗೂ ಹಣಕಾಸು ವಿಭಾಗದ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವವರನ್ನು ಪಾರದರ್ಶಕ ಪ್ರಕ್ರಿಯೆಯ ಮೂಲಕ ನೇಮಕ ಮಾಡಬೇಕು ಎಂದು ಹೇಳಿದರು.

ಸಿಬ್ಬಂದಿಗೆ ಬಾಕಿ ಇರುವ ವೇತನವನ್ನು ವಿಳಂಬ ಮಾಡದೆ ಪಾವತಿಸಬೇಕು. ಪಿಎಫ್ ಹಾಗೂ ಇಎಸ್‌ಐ ಮೊತ್ತವನ್ನು ನಿಯಮಾನುಸಾರ ಜಮಾ ಮಾಡಬೇಕು. ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಿ, ತನಿಖೆಯಲ್ಲಿ ನಿಯಮ ಉಲ್ಲಂಘನೆ ಸಾಬೀತಾದಲ್ಲಿ ಜವಾಬ್ದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ರವಿಗೌಡ ಮೀರಾಪೂರು ಒತ್ತಾಯಿಸಿದರು.

ಆ.7ರಂದು ಸಲ್ಲಿಸಿದ ಮನವಿಯಲ್ಲಿರುವ ಪ್ರಶ್ನೆಗಳಿಗೆ ವಿಶ್ವವಿದ್ಯಾಲಯ ಆಡಳಿತ ಶೀಘ್ರವಾಗಿ ಸ್ಪಷ್ಟ ಉತ್ತರ ನೀಡಬೇಕು ಹಾಗೂ ಕೇಳಲಾಗಿರುವ ದಾಖಲೆಗಳನ್ನು ಬಹಿರಂಗಪಡಿಸಬೇಕು. ಇದಕ್ಕೆ ಸ್ಪಂದಿಸದಿದ್ದರೆ ಅ.5ರಂದು ವಿಶ್ವವಿದ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರಮೇಶ್, ಮಹಾಲಿಂಗ ಸೇರಿದಂತೆ ಇತರರು ಉಪಸ್ಥಿತರಿದ್ದರು.