ರಾಯಚೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ತಡೆ ನೀಡಬೇಕು ಹಾಗೂ ಮತದಾರರ ಪಟ್ಟಿಯಿಂದ ತಪ್ಪಾಗಿ ಕೈಬಿಡಲಾದ ಅರ್ಹರ ಹೆಸರುಗಳನ್ನು ಮರುಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಲಿಬರೇಷನ್ ಹಾಗೂ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಟಿಪ್ಪು ಸುಲ್ತಾನ್ ಗಾರ್ಡನ್ ಸಮೀಪ ಜಮಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮೂವರು ಚುನಾವಣಾ ಆಯುಕ್ತರ ಪೈಕಿ ಇಬ್ಬರು ವಿವಿಧ ಸಂದರ್ಭಗಳಲ್ಲಿ ಮತದಾರರ ನೋಂದಣಿ, ಹೊಸ ಹೆಸರುಗಳ ಸೇರ್ಪಡೆ, ಹೆಸರು ತೆಗೆದುಹಾಕುವಿಕೆ ಹಾಗೂ ಎಸ್ಐಆರ್ಗೆ ಸಂಬಂಧಿಸಿದ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳಿವೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು ಸ್ಪಷ್ಟತೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಮತದಾರರ ದತ್ತಾಂಶ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ರಾಜ್ಯ ಹಾಗೂ ಕ್ಷೇತ್ರ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ದತ್ತಾಂಶ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಅನುಸರಿಸಲಾಗುವ ಮಾನದಂಡ ಮತ್ತು ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗವು ಸ್ವತಂತ್ರ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಮೂಲಕ ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಬೇಕು. ಅರ್ಹ ನಾಗರಿಕರು ಮತದಾನದ ಅವಕಾಶದಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪಟ್ಟಿಯಿಂದ ತಪ್ಪಾಗಿ ಕೈಬಿಡಲಾದ ಅರ್ಹ ಮತದಾರರ ಹೆಸರುಗಳನ್ನು ಪರಿಶೀಲಿಸಿ ಮತ್ತೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಎಸ್ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು, ಮತದಾರರ ಪಟ್ಟಿಯಿಂದ ಕೈಬಿಡಲಾದ ಅರ್ಹರ ಹೆಸರುಗಳನ್ನು ಮರುಸೇರ್ಪಡೆ ಮಾಡಬೇಕು ಹಾಗೂ ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸ ಉಳಿಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
ಪ್ರತಿಭಟನೆಯಲ್ಲಿ ಕೆ.ಜಿ. ವಿರೇಶ, ಅಜೀಜ್ ಜಾಗ್ರೀದಾರ್, ಶಾಂತರಾಮ್ ನಾಯಕ, ಚಂದ್ರಶೇಖರ್ ಕ್ಯಾತ್ನಟಿ, ಮಹೇಶ್ ಚೀಕಲಪರ್ವಿ, ಚೆನ್ನಬಸವ ಜಾನೆಕಲ್, ಕರಿಯಪ್ಪ ಅಚ್ಚೋಳಿ, ಹೆಚ್. ಪದ್ಮಾ, ಗೋಕಾರಮ್ಮ, ಡಿ.ಎಸ್. ಶರಣಸವ, ಜಿಲಾನಿ ಪಾಷ, ಹನುಮಂತು, ತಿಮ್ಮಪ್ಪ, ಮಾರೆಪ್ಪ, ದೇವಪ್ಪ, ಶ್ರೀಶೈಲರೆಡ್ಡಿ, ಅಣ್ಣಪ್ಪ, ರಾಮುನಾಯಕ, ನಾಗರಾಜ, ನಿಸಾರ್, ಭೀಮಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.



