ರಾಯಚೂರು, ಸೆ.28: ತೆರಿಗೆ ವಸೂಲಾತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೆ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ಶಾವಂತಗೇರಾ ಹಾಗೂ ಮಾನ್ವಿ ತಾಲೂಕಿನ ಸಾದಾಪುರ ಗ್ರಾಮ ಪಂಚಾಯಿತಿಗಳ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕರವಸೂಲಿಗಾರರ ಸಿಬ್ಬಂದಿ ಅನುಮೋದನೆಯನ್ನು ರದ್ದುಗೊಳಿಸಿ, ಸೇವೆಯಿಂದ ವಜಾಗೊಳಿಸುವ ಕುರಿತು ಇಲಾಖಾ ವಿಚಾರಣೆ ಹಾಗೂ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ.
ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಈ ಕುರಿತು ಆದೇಶ ಹೊರಡಿಸಿದ್ದು, ತೆರಿಗೆ ವಸೂಲಾತಿಯಲ್ಲಿ ನಿರಂತರ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯಿತಿಯ ಪ್ರಭಾರಿ ಪಿಡಿಒ ಮತೀನುದ್ದೀನ್ ಹಾಗೂ ಕರವಸೂಲಿಗಾರ ರಾಜಶೇಖರ, ಮಾನ್ವಿ ತಾಲೂಕಿನ ಸಾದಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಪ್ರಭುಕುಮಾರ್ ಹಾಗೂ ಕರವಸೂಲಿಗಾರರಾದ ಹೇಮಣ್ಣ ಮತ್ತು ಹನುಮಂತರಾಯ ವಿರುದ್ಧ ಕ್ರಮ ಜರುಗಿಸಲಾಗಿದೆ.
ಸಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ₹31,89,780.68 ತೆರಿಗೆ ಬೇಡಿಕೆ ಇದ್ದು, ಈ ಪೈಕಿ ಕೇವಲ ₹55,246.67 ವಸೂಲಿಯಾಗಿದೆ. ಶಾವಂತಗೇರಾ ಗ್ರಾಮ ಪಂಚಾಯಿತಿಯಲ್ಲಿ ₹28,78,086.78 ತೆರಿಗೆ ಬೇಡಿಕೆಯಿದ್ದು, ₹1,56,328 ಮಾತ್ರ ವಸೂಲಿಯಾಗಿದೆ.
ಜಿಲ್ಲೆಯಲ್ಲಿಯೇ ಈ ಎರಡೂ ಗ್ರಾಮ ಪಂಚಾಯಿತಿಗಳ ತೆರಿಗೆ ವಸೂಲಾತಿ ಪ್ರಗತಿ ಅತ್ಯಂತ ಕಡಿಮೆ ಮಟ್ಟದಲ್ಲಿರುವುದು ಕಂಡುಬಂದಿದೆ. ತೆರಿಗೆ ವಸೂಲಾತಿ ಹೆಚ್ಚಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲವು ಬಾರಿ ಸೂಚನೆ ನೀಡಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಮೇಲಾಧಿಕಾರಿಗಳ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿಯೂ ನಿರ್ಲಕ್ಷ್ಯ ತೋರಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು–2021ರ ನಿಯಮ 3ರ ಅನ್ವಯ ಸಂಬಂಧಿಸಿದ ಇಬ್ಬರು ಪಿಡಿಒಗಳನ್ನು ಅಮಾನತುಗೊಳಿಸಲಾಗಿದೆ.
ಅದೇ ರೀತಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸ್ವರೂಪ, ವೇತನ, ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರೆ ಸೇವಾ ಷರತ್ತುಗಳು) ನಿಯಮಗಳು–2020ರ ನಿಯಮ 8ರ ಅನ್ವಯ ಮೂವರು ಕರವಸೂಲಿಗಾರರ ಸಿಬ್ಬಂದಿ ಅನುಮೋದನೆಯನ್ನು ರದ್ದುಗೊಳಿಸಿ, ಸೇವೆಯಿಂದ ವಜಾಗೊಳಿಸುವ ಕುರಿತು ಇಲಾಖಾ ವಿಚಾರಣೆ ನಡೆಸುವಂತೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.



