ರಾಯಚೂರು, ಸೆ.29: ಜಿಲ್ಲೆಯ ಐತಿಹಾಸಿಕ, ನೈಸರ್ಗಿಕ ಹಾಗೂ ಸಾಂಸ್ಕೃತಿಕ ಮಹತ್ವದ ಪ್ರವಾಸಿ ತಾಣಗಳನ್ನು ಸಂರಕ್ಷಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.

ನಗರದ ಬಸ್ ನಿಲ್ದಾಣ ಸಮೀಪದ ಮೆಕ್ಕಾ ದರ್ವಾಜ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ರಾಯಚೂರು ಮಹಾನಗರ ಪಾಲಿಕೆ, ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ–2026ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರವಾಸೋದ್ಯಮವು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ದೇಶದ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವುದರೊಂದಿಗೆ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಹಾಗೂ ಪ್ರಕೃತಿ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಕ್ಷೇತ್ರವಾಗಿದೆ. ಹೀಗಾಗಿ ಪ್ರವಾಸಿ ತಾಣಗಳ ಸ್ವಚ್ಛತೆ, ಸುರಕ್ಷತೆ ಹಾಗೂ ಮೂಲ ಸ್ವರೂಪದ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

ಕರ್ನಾಟಕವು ಪ್ರವಾಸೋದ್ಯಮದ ದೃಷ್ಟಿಯಿಂದ ಅಪಾರ ವೈವಿಧ್ಯ ಹೊಂದಿರುವ ರಾಜ್ಯವಾಗಿದೆ. ಅದೇ ರೀತಿ ರಾಯಚೂರು ಜಿಲ್ಲೆಯೂ ಎರಡು ನದಿಗಳ ನಡುವೆ ನೆಲೆಗೊಂಡಿದ್ದು, ಐತಿಹಾಸಿಕ ಹಾಗೂ ನೈಸರ್ಗಿಕ ಸಂಪತ್ತಿನಿಂದ ಸಮೃದ್ಧವಾಗಿದೆ. ಮಸ್ಕಿಯ ಅಶೋಕ ಕಾಲದ ಐತಿಹಾಸಿಕ ತಾಣಗಳು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ಅನೇಕ ಸ್ಥಳಗಳಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ 38 ಪ್ರವಾಸಿ ತಾಣಗಳ ಕುರಿತು ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಸುಲಭವಾಗಿ ಮಾಹಿತಿ ದೊರೆಯುವಂತೆ ಮಾಹಿತಿ ಫಲಕಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೆ, ಸರ್ಕಾರಿ ನೌಕರರ ಸಂಘ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪ್ರತಿ ತಿಂಗಳು ಮಕ್ಕಳನ್ನು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಕರೆದೊಯ್ದು ಅವುಗಳ ಇತಿಹಾಸ ಹಾಗೂ ಮಹತ್ವವನ್ನು ಪರಿಚಯಿಸಲಾಗುತ್ತಿದೆ ಎಂದರು.

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ‘ಈಕೋ ಟೂರಿಸಂ’ ಮೂಲಕ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸದ ಅನುಭವ ಪಡೆಯುವುದರೊಂದಿಗೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಜೊತೆಗೆ ಜಿಲ್ಲೆಯಲ್ಲಿರುವ ಇನ್ನಷ್ಟು ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರವಾಸಿ ತಾಣಗಳಿಗೆ ತೆರಳುವವರು ಸ್ವಚ್ಛತೆಯ ಬಗ್ಗೆ ಜವಾಬ್ದಾರಿ ವಹಿಸಬೇಕು. ಪ್ಲಾಸ್ಟಿಕ್ ಬಾಟಲಿ ಹಾಗೂ ಇತರೆ ತ್ಯಾಜ್ಯವನ್ನು ಸ್ಥಳದಲ್ಲೇ ಬಿಸಾಡದೆ ತಮ್ಮೊಂದಿಗೆ ಹಿಂದಕ್ಕೆ ತಂದು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಈ ಮೂಲಕ ‘ಜೀರೋ ವೇಸ್ಟ್ ಟ್ರೆಕ್ಕಿಂಗ್’ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್ ಕನವಳ್ಳಿ ಮಾತನಾಡಿ, ರಾಯಚೂರು ನಗರದಲ್ಲಿರುವ ಪಾಂಚೆ ಬಿಬಿ ತಾಣದ ಕುರಿತು ಸ್ಥಳೀಯರಲ್ಲಿಯೇ ಹೆಚ್ಚಿನ ಮಾಹಿತಿ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ 100 ವಿದ್ಯಾರ್ಥಿಗಳಿಗೆ ಟ್ರೆಕ್ಕಿಂಗ್ ಆಯೋಜಿಸಿ, ಆ ಪ್ರದೇಶದ ವೈಶಿಷ್ಟ್ಯ ಹಾಗೂ ಮಹತ್ವವನ್ನು ಪರಿಚಯಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 38 ಪ್ರವಾಸಿ ತಾಣಗಳ ವಿವರಗಳನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಡಿಜಿಟಲ್ ಮಾಹಿತಿ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಬಸ್ ನಿಲ್ದಾಣ, ನ್ಯಾಯಾಲಯ, ಜಿಲ್ಲಾ ಪಂಚಾಯಿತಿ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಒಳಗೊಂಡ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ. ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಹೈಪರ್‌ಲಿಂಕ್ ಮೂಲಕ ಜಿಲ್ಲೆಯ ಎಲ್ಲ 38 ಪ್ರವಾಸಿ ತಾಣಗಳ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.

ಪ್ರವಾಸೋದ್ಯಮವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಪ್ರವಾಸಿಗರು ತಮ್ಮ ಅಗತ್ಯ ಮತ್ತು ಲಭ್ಯ ಸಮಯಕ್ಕೆ ಅನುಗುಣವಾಗಿ ಪ್ರವಾಸದ ವೇಳಾಪಟ್ಟಿ ಹಾಗೂ ಪ್ರಯಾಣ ಯೋಜನೆ ರೂಪಿಸಿಕೊಳ್ಳಲು ಎಐ ತಂತ್ರಜ್ಞಾನ ನೆರವಾಗಲಿದೆ ಎಂದು ಹೇಳಿದರು.

ಪ್ರಥಮ ಪಿಯುಸಿ ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟವಾಗಿದ್ದು, ಎಐ ಹಾಗೂ ಚಾಟ್‌ಜಿಪಿಟಿಯಂತಹ ಆಧುನಿಕ ತಂತ್ರಜ್ಞಾನಗಳನ್ನು ಕೇವಲ ಮನರಂಜನೆಗೆ ಬಳಸದೆ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ವೇಳೆ ಕೆಎಸ್‌ಟಿಡಿಸಿ ವತಿಯಿಂದ ತರಬೇತಿ ಪಡೆದ ಎರಡನೇ ಹಂತದ 20 ಪ್ರವಾಸಿ ಮಿತ್ರರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ನಂತರ ನಗರದ ಪಾಂಚೆ ಬಿಬಿ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದ್ದವರಿಗಾಗಿ ಟ್ರೆಕ್ಕಿಂಗ್ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶರಣಬಸವ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಕವಿತಾ, ಸಮಾಲೋಚಕರಾದ ಶ್ರೀನಾಥ, ಆನಂದ, ಆಹಾರ ಇಲಾಖೆಯ ವ್ಯವಸ್ಥಾಪಕ ಜಿ. ಹರೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.