ರಾಯಚೂರು: ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜಿನ ಗಣಕಯಂತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯ ವೃದ್ಧಿಸುವ ಉದ್ದೇಶದಿಂದ ಐಬಿಎಂ ಸ್ಕಿಲ್ಸ್‌ಬಿಲ್ಡ್ ನೇತೃತ್ವದಲ್ಲಿ ಮೂರು ದಿನಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಸೆ.29ರಿಂದ ಅ.1ರವರೆಗೆ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ತರಬೇತುದಾರ ಹಾಗೂ ಉದ್ಯೋಗ ಸಲಹೆಗಾರ ಇಂಜರಪು ಹರಿ ಬಾಬು ಅವರು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಒಟ್ಟು 30 ಗಂಟೆಗಳ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ 16 ಗಂಟೆಗಳ ಆನ್‌ಲೈನ್ ಹಾಗೂ 14 ಗಂಟೆಗಳ ಆಫ್‌ಲೈನ್ ತರಗತಿಗಳು ಒಳಗೊಂಡಿದ್ದು, ವಿವಿಧ ಕಲಿಕಾ ಸಂಪನ್ಮೂಲಗಳು ಮತ್ತು ಕೌಶಲ್ಯಗಳ ಕುರಿತು ಪ್ರಾಯೋಗಿಕ ಜ್ಞಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇಂತಹ ತರಬೇತಿಗಳು ವಿದ್ಯಾರ್ಥಿಗಳ ಜ್ಞಾನ ಹಾಗೂ ತಾಂತ್ರಿಕ ಕೌಶಲ್ಯ ಹೆಚ್ಚಿಸಲು ಸಹಕಾರಿಯಾಗಲಿವೆ. ವಿಶೇಷವಾಗಿ ಡೇಟಾ ವಿಶ್ಲೇಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ಸುಲಭ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗಲಿವೆ. ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಈಗಿನಿಂದಲೇ ರೂಢಿಸಿಕೊಂಡರೆ ಭವಿಷ್ಯದಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕ ಡಾ. ಚಕ್ರಧರ ಬಿ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹೊಸ ಕೌಶಲ್ಯಗಳನ್ನು ಬೆಳೆಸುವುದರೊಂದಿಗೆ ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಹಾಗೂ ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಸಿದ್ಧಪಡಿಸುವಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ. ಪದ್ಮಾವತಿ, ಶ್ರೀಮತಿ ಸ್ವಾತಿ ದೀಕ್ಷಿತ್, ಅಬ್ದುಲ್ ಕರೀಂ, ಶಾಫಿಯಾ ಬೇಗಂ, ಹೇಮಾವತಿ, ರುಹಿ ಫಾತಿಮಾ, ಅರ್ಚನಾ, ಸುಷ್ಮಾ, ವೇದಶ್ರೀ ಹಾಗೂ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.