ರಾಯಚೂರು: ಮಾನ್ವಿ ಉಪವಿಭಾಗದಲ್ಲಿ ಜೇಸ್ಕಾಂನ ನಗದು ರಸೀದಿ ಪುಸ್ತಕವನ್ನು ದುರ್ಬಳಕೆ ಮಾಡಿಕೊಂಡು ನಿಗಮಕ್ಕೆ ₹2 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟ ಉಂಟುಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರೆಂದು ಕಂಡುಬರುವ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷೆ ಅಮೃತಾ ಒತ್ತಾಯಿಸಿದ್ದಾರೆ.
ಈ ಕುರಿತು ಗ್ರಾಮೀಣ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೆ.25ರಂದು ಮನವಿ ಸಲ್ಲಿಸಿರುವ ಅವರು, ಮಾನ್ವಿ ಉಪವಿಭಾಗಕ್ಕೆ ಸಂಬಂಧಿಸಿದ ಎಚ್ಎ 06/14 ಸಂಖ್ಯೆಯ ನಗದು ರಸೀದಿ ಪುಸ್ತಕವನ್ನು ಮೆಕ್ಯಾನಿಕ್ ದರ್ಜೆ-2 ನೌಕರ ಗುರುರಾಜ ನಾಯಕ ಅವರು 2026ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ರಸೀದಿ ಪುಸ್ತಕದ ಮೂಲಕ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಹಣವನ್ನು ನಿಗಮಕ್ಕೆ ಪಾವತಿಸದೆ ದುರ್ಬಳಕೆ ಮಾಡಲಾಗಿದೆ ಹಾಗೂ ರಸೀದಿ ಪುಸ್ತಕವನ್ನು ಹಿಂದಿರುಗಿಸದೆ ತಮ್ಮ ಬಳಿಯೇ ಇಟ್ಟುಕೊಳ್ಳಲಾಗಿದೆ ಎಂಬ ಆರೋಪವನ್ನೂ ಮಾಡಲಾಗಿದೆ. ಒಂದು ವೇಳೆ ರಸೀದಿ ಪುಸ್ತಕವನ್ನು ಹಿಂದಿರುಗಿಸಿದ್ದರೆ, ಅದರಲ್ಲಿನ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆಯೇ ಎಂಬುದನ್ನೂ ತನಿಖೆಯ ವೇಳೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ವಿಷಯ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ನಿಗಮಕ್ಕೆ ಆರ್ಥಿಕ ನಷ್ಟ ಉಂಟಾಗಲು ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆಯೇ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನಗದು ರಸೀದಿ ಪುಸ್ತಕ, ಹಣ ಸಂಗ್ರಹ ಹಾಗೂ ನಿಗಮಕ್ಕೆ ಜಮಾ ಮಾಡಿರುವ ವಿವರ ಸೇರಿದಂತೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ಸಂಬಂಧಿಸಿದ ನೌಕರರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಮತ್ತು ಇಲಾಖಾ ನಿಯಮಗಳ ಅನ್ವಯ ಕಠಿಣ ಕ್ರಮ ಜರುಗಿಸಬೇಕು ಎಂದು ಅಮೃತಾ ಒತ್ತಾಯಿಸಿದ್ದಾರೆ.



