ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೆ.29ರಂದು ಗರ್ಭಕಂಠದ ಕ್ಯಾನ್ಸರ್ ಕುರಿತು ಅರಿವು, ಮಹಿಳಾ ಆರೋಗ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಪರಿಸರಸ್ನೇಹಿ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ವಿತರಿಸಿ, ಅವುಗಳ ಬಳಕೆ ಕುರಿತು ಮಾಹಿತಿ ನೀಡಲಾಯಿತು. ಕಾಲೇಜಿಗೆ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ಕೂಡ ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ್ ಮಾತನಾಡಿ, ಋತುಚಕ್ರವು ಹೆಣ್ಣುಮಕ್ಕಳ ದೇಹದಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದ್ದು, ಅದರ ಕುರಿತು ಯಾವುದೇ ಹಿಂಜರಿಕೆ ಅಥವಾ ಸಂಕೋಚ ಹೊಂದಬಾರದು. ಋತುಚಕ್ರದ ಸಮಯದಲ್ಲಿ ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಸರಸ್ನೇಹಿ ಸ್ಯಾನಿಟರಿ ಪ್ಯಾಡ್ಗಳ ಬಳಕೆಗೆ ಆದ್ಯತೆ ನೀಡಬೇಕು. ಮಹಿಳೆಯರು ತಮ್ಮ ಆರೋಗ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಿಳಾ ಆರೋಗ್ಯ ಜಾಗೃತಿದಾರ ಚನ್ನಪ್ಪ ಪಾಟೀಲ್ ಅವರು ಗರ್ಭಕಂಠದ ಕ್ಯಾನ್ಸರ್ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಮಹಿಳಾ ಆರೋಗ್ಯದ ಬಗ್ಗೆ ಅರಿವು ಹೊಂದುವುದು, ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಮುಖ್ಯ ಎಂದು ತಿಳಿಸಿದರು. ಇದೇ ವೇಳೆ ಕಾಲೇಜಿಗೆ ಉಚಿತವಾಗಿ ನೀಡಲಾದ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ಬಳಕೆಯ ವಿಧಾನವನ್ನೂ ವಿದ್ಯಾರ್ಥಿನಿಯರಿಗೆ ವಿವರಿಸಿದರು.
ಕಾರ್ಯಕ್ರಮದ ಸಂಘಟಕರಾದ ಇಕೋ ಕ್ಲಬ್ ಮತ್ತು ರೇಂಜರ್ಸ್ ಘಟಕದ ಸಂಚಾಲಕಿ ಸರಸ್ವತಿ ಕೆ. ಹಾಗೂ ಸ್ಟುಡೆಂಟ್ ವೆಲ್ಫೇರ್ ಸೆಲ್ ಸಂಚಾಲಕಿ ಡಾ. ಸ್ವರೂಪ ಎಂ. ಅವರು ಗರ್ಭಕಂಠದ ಕ್ಯಾನ್ಸರ್, ಎಚ್ಪಿವಿ ಸೋಂಕಿನ ಕುರಿತು ಅರಿವು ಹಾಗೂ ಮಹಿಳೆಯರು ಕೈಗೊಳ್ಳಬೇಕಾದ ಆರೋಗ್ಯ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರು ತಾವು ಪಡೆದ ಮಾಹಿತಿಯನ್ನು ತಮ್ಮ ಕುಟುಂಬ ಹಾಗೂ ಗ್ರಾಮಗಳಲ್ಲಿನ ಮಹಿಳೆಯರಿಗೂ ತಲುಪಿಸಬೇಕು. ಮಹಿಳಾ ಆರೋಗ್ಯದ ಕುರಿತು ಹೆಚ್ಚಿನ ಅರಿವು ಮೂಡಿದಾಗ ಮಾತ್ರ ಇಂತಹ ಜಾಗೃತಿ ಕಾರ್ಯಕ್ರಮಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.



