ರಾಯಚೂರು: ನಗರದ ವಾರ್ಡ್ ನಂ.15ರ ನೇತಾಜಿ ನಗರದಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಬಡಾವಣೆಯ ನಿವಾಸಿಗಳು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಸಮಸ್ಯೆ ಪದೇಪದೇ ಮರುಕಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಪಲುಗುಲ ನಾಗರಾಜ ಆರೋಪಿಸಿದ್ದಾರೆ.

ನೇತಾಜಿ ನಗರದಲ್ಲಿ ದಿನವೊಂದಕ್ಕೆ ಹಲವು ಬಾರಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಯಾವುದೇ ನಿಗದಿತ ಸಮಯವಿಲ್ಲದೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿರುವುದರಿಂದ ಮನೆಮಂದಿ, ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಗಂಟೆಗಟ್ಟಲೆ ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗದೆ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಅವರು ದೂರಿದ್ದಾರೆ.

ವಿದ್ಯುತ್ ಸಮಸ್ಯೆ ಕುರಿತು ಸಂಬಂಧಪಟ್ಟ ಜೆಇ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಕೆಲವೊಮ್ಮೆ ಕರೆ ಸಂಪರ್ಕವಾಗುವುದಿಲ್ಲ, ಇನ್ನೂ ಕೆಲ ಸಂದರ್ಭಗಳಲ್ಲಿ ಕರೆ ಸ್ವೀಕರಿಸುವುದಿಲ್ಲ. ಕರೆ ಸ್ವೀಕರಿಸಿದ ಸಂದರ್ಭದಲ್ಲಿಯೂ ವಿದ್ಯುತ್ ಕಂಬದ ಸಂಖ್ಯೆ ಹಾಗೂ ಮನೆಯ ಆರ್‌ಆರ್ ಸಂಖ್ಯೆ ಕೇಳಲಾಗುತ್ತಿದೆ. ಇಡೀ ಪ್ರದೇಶದಲ್ಲೇ ವಿದ್ಯುತ್ ಇಲ್ಲದಿರುವಾಗ ಪ್ರತ್ಯೇಕ ಮನೆಯ ಆರ್‌ಆರ್ ಸಂಖ್ಯೆ ಕೇಳುವುದರಿಂದ ಸಮಸ್ಯೆಗೆ ತ್ವರಿತ ಪರಿಹಾರ ಸಿಗುವುದಿಲ್ಲ ಎಂದು ನಾಗರಾಜ ಅಸಮಾಧಾನ ವ್ಯಕ್ತಪಡಿಸಿದರು.

ಇದರೊಂದಿಗೆ ನೇತಾಜಿ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದಲೂ ನಿವಾಸಿಗಳಿಗೆ ಸಮಸ್ಯೆ ಹೆಚ್ಚಾಗಿದೆ. ಪೈಪ್‌ಲೈನ್ ಅಳವಡಿಕೆಗಾಗಿ ವಿವಿಧ ರಸ್ತೆಗಳನ್ನು ಅಗೆದಿದ್ದು, ಕಾಮಗಾರಿ ಪೂರ್ಣಗೊಂಡ ಸ್ಥಳಗಳಲ್ಲಿ ರಸ್ತೆಯನ್ನು ಸಮರ್ಪಕವಾಗಿ ಸರಿಪಡಿಸಿಲ್ಲ. ಹೀಗಾಗಿ ರಾತ್ರಿ ವೇಳೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಅಗೆದ ಹಾಗೂ ಅಸಮತಟ್ಟಾದ ರಸ್ತೆಗಳಲ್ಲಿ ಸಂಚರಿಸುವುದು ಸಾರ್ವಜನಿಕರಿಗೆ ಕಷ್ಟಕರವಾಗಿದ್ದು, ಅಪಘಾತದ ಆತಂಕವೂ ಎದುರಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಉಚಿತ ವಿದ್ಯುತ್ ಪೂರೈಕೆಯ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಬಡಾವಣೆಗೆ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಯೇ ಲಭ್ಯವಾಗದಿದ್ದರೆ ಯೋಜನೆಯ ಪ್ರಯೋಜನ ಜನರಿಗೆ ಹೇಗೆ ತಲುಪಲಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ಅವರು ಹೇಳಿದರು.

ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ನೇತಾಜಿ ನಗರಕ್ಕೆ, ಅದರಲ್ಲೂ ಶ್ರೀ ನಗರೇಶ್ವರ ದೇವಸ್ಥಾನದ ಹಿಂಭಾಗದ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಪದೇಪದೇ ವಿದ್ಯುತ್ ಸಂಪರ್ಕ ಕಡಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿ, ತಾಂತ್ರಿಕ ದೋಷಗಳಿದ್ದರೆ ಕೂಡಲೇ ಸರಿಪಡಿಸಬೇಕು. ಬಡಾವಣೆಯ ನಿವಾಸಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ದೊರೆಯುವಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಪಲುಗುಲ ನಾಗರಾಜ ಆಗ್ರಹಿಸಿದ್ದಾರೆ.