ರಾಯಚೂರು: ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಹಾಲಿ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಇನ್ನೂ ಮುಕ್ತಾಯವಾಗದಿದ್ದರೂ ಹೊಸ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರನ್ನು ನೇಮಕ ಮಾಡಿರುವ ಕ್ರಮ ನಿಯಮಬಾಹಿರವಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಜಂಬಣ್ಣ ಯಕ್ಲಾಸಪೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರಿಗೆ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.27ರಂದು ಮಡಿವಾಳ ಸಮುದಾಯ ಭವನದಲ್ಲಿ ಸಮಾಜದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಲಾಗಿತ್ತು. ಮುಂದಿನ ಅವಧಿಗೆ ನೂತನ ಕಾರ್ಯಕಾರಿ ಮಂಡಳಿ ರಚಿಸುವ ಕುರಿತು ಸದಸ್ಯರಿಂದ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲಾಗಿತ್ತು ಎಂದು ಹೇಳಿದರು.
2027-28ರಿಂದ ಮೂರು ವರ್ಷಗಳ ಅವಧಿಗೆ ನೂತನ ಜಿಲ್ಲಾ ಸಮಿತಿ ರಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಹೊಸ ಸದಸ್ಯರ ನೋಂದಣಿ ಹಾಗೂ ಹಿಂದಿನ ಸದಸ್ಯತ್ವಗಳ ಅಂಗೀಕಾರ ಸೇರಿದಂತೆ ಹಲವು ವಿಷಯಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಮಾಜದ ಬೈಲಾ ಅನುಸಾರ ಸರ್ವ ಸದಸ್ಯರ ಸಮ್ಮುಖದಲ್ಲಿ ಪಾರದರ್ಶಕವಾಗಿ ನೂತನ ಸಮಿತಿ ರಚಿಸಬೇಕು ಎಂಬ ನಿರ್ಧಾರಕ್ಕೂ ಬರಲಾಗಿದೆ ಎಂದು ತಿಳಿಸಿದರು.
ಸಮಾಜದ ಅಭಿವೃದ್ಧಿಗೆ ಅನುದಾನ ಒದಗಿಸಿದ ಶಾಸಕರು, ಸಚಿವರು, ಸಂಸದರು ಹಾಗೂ ಮಹಾನಗರ ಪಾಲಿಕೆಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಪಡೆಯಲು ಜನಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ಎ. ಶಾಂತಪ್ಪ ಅವರು ಕಳೆದ ಎರಡು ವರ್ಷಗಳಲ್ಲಿ ಸಮಾಜದ ವತಿಯಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ಸಭೆಯಲ್ಲಿ ಮಂಡಿಸಿದ್ದಾರೆ. ಸಮುದಾಯ ಭವನದ ನಿರ್ಮಾಣ ಮುಂದುವರಿದಿದ್ದು, ಮೊದಲ ಮಹಡಿ ಹಾಗೂ ಕಚೇರಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಸಂಸದರ ಅನುದಾನದಡಿ ಹೈಟೆಕ್ ಧೋಬಿಘಾಟ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಗದ್ವಾಲ್ ಮುಖ್ಯ ರಸ್ತೆಯಿಂದ ಶ್ರೀ ಮಡಿವಾಳ ಮಾಚಿದೇವರ ದೇವಸ್ಥಾನದವರೆಗೆ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ದೇವಸ್ಥಾನದ ಮೇಲ್ಚಾವಣಿ ದುರಸ್ತಿ ಹಾಗೂ ಮೆಟ್ಟಿಲುಗಳಿಗೆ ಮೇಲ್ಚಾವಣಿ ಅಳವಡಿಸುವ ಕಾರ್ಯವೂ ನಡೆದಿದೆ ಎಂದು ವಿವರಿಸಿದರು.
ನಗರದ ಬೋಳಮಾನದೊಡ್ಡಿ ರಸ್ತೆಯ ಏಗನೂರು ಟೆಂಪಲ್ ಹಿಂಭಾಗದಲ್ಲಿ ಸಮಾಜದ ರುದ್ರಭೂಮಿಗಾಗಿ ಎರಡು ಎಕರೆ ಜಾಗ ಮಂಜೂರು ಮಾಡಿಸಲಾಗಿದೆ. ಮಡಿವಾಳ ಮಾಚಿದೇವರ ಜಯಂತಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗಿದೆ ಎಂದು ಹೇಳಿದರು.
ಈ ನಡುವೆ ಸೆ.29ರಂದು ಹಾಲಿ ಕಾರ್ಯಕಾರಿ ಸಮಿತಿಯ ಗಮನಕ್ಕೆ ತರದೆ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರನ್ನು ನೇಮಕ ಮಾಡಿರುವ ವಿಷಯ ಪತ್ರಿಕೆಗಳ ಮೂಲಕ ತಿಳಿದುಬಂದಿದೆ. ಹಾಲಿ ಸಮಿತಿ ಕಾರ್ಯನಿರ್ವಹಿಸುತ್ತಿರುವಾಗ ಈ ರೀತಿಯ ನೇಮಕ ಮಾಡಿರುವುದು ಸರಿಯಲ್ಲ ಎಂದು ಜಂಬಣ್ಣ ಯಕ್ಲಾಸಪೂರು ಆರೋಪಿಸಿದರು.
ಈ ಕ್ರಮವು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಸೆಕ್ಷನ್ 70ರ ಉಲ್ಲಂಘನೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದು, ಸಂಬಂಧಪಟ್ಟವರ ವಿರುದ್ಧ ಸಹಕಾರ ಸಂಘಗಳ ನಿಬಂಧಕರಿಗೆ ಅಧಿಕೃತ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ತಮ್ಮನ್ನು ಒಳಗೊಂಡಂತೆ 10 ಮಂದಿ ಕಾರ್ಯಕಾರಿ ಸದಸ್ಯರನ್ನು 2024ರ ಆಗಸ್ಟ್ 24ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸಮಾಜದ ಬೈಲಾ ಅನುಸಾರ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಹೀಗಾಗಿ ಹಾಲಿ ಸಮಿತಿಯ ಅಧಿಕಾರಾವಧಿ 2027ರ ಜೂನ್ 23ರವರೆಗೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಮಾಜದಲ್ಲಿ ಅನಗತ್ಯ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಹಕಾರ ಸಂಘಗಳ ನಿಬಂಧಕರು ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಸಮಾಜದ ಯುವಕರು ಮತ್ತು ಬಂಧುಗಳು ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್, ಶಾಂತಪ್ಪ ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.



