ರಾಯಚೂರು: ಮಮದಾಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2024-25ನೇ ಸಾಲಿನಲ್ಲಿ ತಮ್ಮ ಕಾರ್ಯಾವಧಿಯಲ್ಲಿ ಹಣ ದುರುಪಯೋಗವಾಗಿದೆ ಎಂಬ ಆರೋಪ ವಾಸ್ತವಕ್ಕೆ ದೂರವಾಗಿದೆ. ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಿರುವ ಮೊತ್ತವನ್ನು ಸಂಘದಿಂದ ತಮಗೆ ಬರಬೇಕಿರುವ ಗ್ರಾಚುಟಿ ಹಾಗೂ ಗಳಿಕೆ ರಜೆ ವೇತನದಲ್ಲಿ ಸರಿದೂಗಿಸಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಸಂಘದ ಮಾಜಿ ಕಾರ್ಯದರ್ಶಿ ಮಲ್ಲಪ್ಪ ಬಾಗ್ಲಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭಿಕ ಲೆಕ್ಕಪರಿಶೋಧನಾ ವರದಿಯಲ್ಲಿ ₹7,61,029 ಮೊತ್ತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಈ ಮೊತ್ತದ ಇತ್ಯರ್ಥಕ್ಕೆ ತಾವು ಸಿದ್ಧವಿದ್ದು, ಸಂಘದಿಂದ ತಮಗೆ ಬರಬೇಕಾದ ₹7,25,700 ಗ್ರಾಚುಟಿ ಹಾಗೂ ಗಳಿಕೆ ರಜೆ ವೇತನವನ್ನು ಅದಕ್ಕೆ ಹೊಂದಾಣಿಕೆ ಮಾಡಿ, ಉಳಿಯುವ ₹35,329ನ್ನು ಸ್ವಂತವಾಗಿ ಪಾವತಿಸುವುದಾಗಿ 2025ರ ನ.17ರಂದೇ ಲಿಖಿತವಾಗಿ ತಿಳಿಸಿದ್ದಾಗಿ ಹೇಳಿದರು.
ನಂತರ ಸಿದ್ಧಪಡಿಸಲಾದ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಿತ ಮೊತ್ತವನ್ನು ₹7,47,494 ಎಂದು ದಾಖಲಿಸಲಾಗಿದೆ. ಈ ಸಂಬಂಧ ಆಡಳಿತ ಮಂಡಳಿಯಿಂದ 2026ರ ಜು.27ರಂದು ನೋಟಿಸ್ ಬಂದಿದ್ದು, ಜು.30ರಂದು ಅದಕ್ಕೆ ಪ್ರತಿಕ್ರಿಯಿಸಿ ತಮ್ಮ ಗ್ರಾಚುಟಿ ಹಾಗೂ ಗಳಿಕೆ ರಜೆ ವೇತನದ ಹಣದಲ್ಲಿಯೇ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳುವಂತೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾಗಿ ವಿವರಿಸಿದರು.
ಸೆ.24ರಂದು ನಡೆದ ಆಡಳಿತ ಮಂಡಳಿ ಸಭೆಯ ನಂತರ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿರುವ ಮೊತ್ತಕ್ಕಿಂತಲೂ ಹೆಚ್ಚಿನ ಹಣವನ್ನು ತಾವು ದುರುಪಯೋಗ ಮಾಡಿಕೊಂಡಿರುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಇಂತಹ ಮಾಹಿತಿ ಸತ್ಯಕ್ಕೆ ದೂರವಾಗಿದ್ದು, ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಬಾಗ್ಲಿ ಆರೋಪಿಸಿದರು.
ಸಂಘದಲ್ಲಿ ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅದರ ಬೆಳವಣಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ತಮ್ಮ ಸೇವಾವಧಿಯಲ್ಲಿ ಸಂಘವು ಸುಮಾರು ಆರು ಬಾರಿ ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಗೆ ಭಾಜನವಾಗಿದೆ ಎಂದು ಅವರು ತಿಳಿಸಿದರು.
ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಿರುವ ಮೊತ್ತದ ಬಗ್ಗೆ ತಾವು ಈಗಾಗಲೇ ಸ್ಪಷ್ಟನೆ ನೀಡಿರುವುದರಿಂದ, ತಮಗೆ ಬರಬೇಕಾದ ಗ್ರಾಚುಟಿ ಮತ್ತು ಗಳಿಕೆ ರಜೆ ವೇತನದೊಂದಿಗೆ ಅದನ್ನು ಸರಿದೂಗಿಸಿ ಪ್ರಕರಣಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.
ತಮ್ಮ ಮನವಿಯನ್ನು ಪರಿಗಣಿಸದೆ, ಆಧಾರರಹಿತ ಆರೋಪಗಳ ಮೂಲಕ ತೇಜೋವಧೆ ಮುಂದುವರಿಸಿದರೆ ಸಂಬಂಧಪಟ್ಟವರ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಹೋರಾಟ ನಡೆಸುವುದಾಗಿ ಮಲ್ಲಪ್ಪ ಬಾಗ್ಲಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಬಡಿಗೇರ್, ಜಿ. ಸುಭಾಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



