ರಾಯಚೂರು, ಸೆ.30: ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿದ್ದು, ಸಾಕು ನಾಯಿ ಅಥವಾ ಬೀದಿ ನಾಯಿ ಕಚ್ಚಿದರೆ, ದೇಹದ ಮೇಲಿನ ಗಾಯವನ್ನು ನೆಕ್ಕಿದರೆ ಅಥವಾ ಉಗುರಿನಿಂದ ಪರಚಿದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಗಾಯವನ್ನು ನೀರಿನಿಂದ ಚೆನ್ನಾಗಿ ತೊಳೆದು, ಯಾವುದೇ ಪದಾರ್ಥ ಹಚ್ಚದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಹರಿಜನವಾಡ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಸುನೀಲ್ ತಿಳಿಸಿದರು.

ವಿಶ್ವ ರೇಬೀಸ್ ತಡೆ ದಿನದ ಅಂಗವಾಗಿ ನಗರದ ಹರಿಜನವಾಡ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗಾಜಗಾರಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೇಬೀಸ್ ಸೋಂಕು ಹೊಂದಿರುವ ನಾಯಿ, ಬೆಕ್ಕು, ಹೆಗ್ಗಣ ಸೇರಿದಂತೆ ವಿವಿಧ ಪ್ರಾಣಿಗಳ ಕಚ್ಚುವಿಕೆಯಿಂದ ಸೋಂಕು ಹರಡುವ ಅಪಾಯವಿದೆ. ಅದರಲ್ಲೂ ನಾಯಿಗಳಿಂದ ರೇಬೀಸ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಾಯಿ ಕಚ್ಚಿದ ಪ್ರಕರಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ನಾಯಿ ಕಚ್ಚಿದ ಮೊದಲ ದಿನವೇ ರೇಬೀಸ್ ನಿರೋಧಕ ಚುಚ್ಚುಮದ್ದು ಪಡೆದು, ನಂತರ ವೈದ್ಯರು ಸೂಚಿಸಿದ ವೇಳಾಪಟ್ಟಿಯಂತೆ ಮುಂದಿನ ಚುಚ್ಚುಮದ್ದುಗಳನ್ನು ಪಡೆಯುವುದು ಅತ್ಯಗತ್ಯ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ ಮಾತನಾಡಿ, ನಾಯಿ ಕಚ್ಚಿದ ಗಾಯಕ್ಕೆ ಪಟ್ಟಿ ಕಟ್ಟುವುದು, ನಾಟಿ ಔಷಧಿ ಬಳಸುವುದು, ದಾರ ಕಟ್ಟಿಸುವುದು ಸೇರಿದಂತೆ ಮೂಢನಂಬಿಕೆಗಳನ್ನು ಅನುಸರಿಸಬಾರದು. ಬದಲಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮಕ್ಕಳನ್ನು ನಾಯಿಗಳ ಗುಂಪು ಇರುವ ಪ್ರದೇಶಗಳಲ್ಲಿ ಆಟವಾಡಲು ಬಿಡಬಾರದು. ರಸ್ತೆಯ ಬದಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸಬೇಕು. ರೇಬೀಸ್ ಕುರಿತು ಮಕ್ಕಳು ತಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನವರಿಗೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಪುಂಡಲಿಕ ಗಂಜಿ, ಮುಖ್ಯೋಪಾಧ್ಯಾಯ ಎಸ್. ಬಾಬು, ಶಿಕ್ಷಕಿ ಪಾರ್ವತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ., ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ, ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಂದ್ರ, ಪಿಎಚ್‌ಸಿಒ ಗಿರಿಜಾ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.