ರಾಯಚೂರು, ಅ.1: ವೈಟಿಪಿಎಸ್ ಘಟಕಕ್ಕಾಗಿ ಜಮೀನು ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಉದ್ಯೋಗ ಅಥವಾ ತರಬೇತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ನಿಗದಿಪಡಿಸಿರುವ ಭೂಒಡೆತನದ ಅವಧಿಗೆ ಸಂಬಂಧಿಸಿದ ಷರತ್ತನ್ನು ಸಡಿಲಿಸಿ, ಅರ್ಹ ಭೂಸಂತ್ರಸ್ತರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ರಾಯಚೂರು ಕೈಗಾರಿಕಾ ಪ್ರದೇಶ ಭೂಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಘ ಏಗನೂರು ಅಧ್ಯಕ್ಷ ಕೆ. ಸತ್ಯನಾರಾಯಣರಾವ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 15 ವರ್ಷಗಳ ಹಿಂದೆ ವೈಟಿಪಿಎಸ್ ಘಟಕ ನಿರ್ಮಾಣಕ್ಕಾಗಿ ರಾಯಚೂರು ತಾಲೂಕಿನ ಏಗನೂರು, ಚಿಕ್ಕಸೂಗೂರು, ಕುಕನೂರು, ಹೆಗ್ಗಸನಹಳ್ಳಿ ಹಾಗೂ ದೇವಸೂಗೂರು ಗ್ರಾಮಗಳಿಗೆ ಸೇರಿದ ಸುಮಾರು 1,150 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ ಜಮೀನು ನೀಡಿದ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ನೇರ ನೇಮಕಾತಿ ಅಥವಾ ತರಬೇತಿ ಮೂಲಕ ಉದ್ಯೋಗ ಕಲ್ಪಿಸುವ ಭರವಸೆ ನೀಡಲಾಗಿತ್ತು ಎಂದು ಹೇಳಿದರು.

ಇದಕ್ಕೂ ಮುನ್ನ 1993-94ರಲ್ಲಿ ಇದೇ ಭಾಗದ ಬೆಲೆಬಾಳುವ ಕೃಷಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಪ್ರತಿ ಎಕರೆಗೆ ₹50 ಸಾವಿರದಂತೆ ಸ್ವಾಧೀನಪಡಿಸಿಕೊಂಡಿತ್ತು. ನಂತರ 2012ರಲ್ಲಿ ವೈಟಿಪಿಎಸ್ ಯೋಜನೆಗಾಗಿ ಮತ್ತೊಮ್ಮೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ವಿವರಿಸಿದರು.

ವೈಟಿಪಿಎಸ್‌ನಲ್ಲಿ ಸುಮಾರು ಒಂದು ದಶಕದಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದರೂ, ಯೋಜನೆಗಾಗಿ ಜೀವನಾಧಾರವಾಗಿದ್ದ ಜಮೀನು ಬಿಟ್ಟುಕೊಟ್ಟ ಹಲವು ರೈತ ಕುಟುಂಬಗಳಿಗೆ ಇನ್ನೂ ಉದ್ಯೋಗದ ಭರವಸೆ ಈಡೇರಿಲ್ಲ. 2016ರಲ್ಲಿ ಭೂಸಂತ್ರಸ್ತ ಕುಟುಂಬಗಳ ಸದಸ್ಯರಿಂದ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅಗತ್ಯ ವಿದ್ಯಾರ್ಹತಾ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಪರಿಶೀಲನೆ ವೇಳೆ ಮೂರು ವರ್ಷಗಳ ಭೂಒಡೆತನದ ಅವಧಿ ಪೂರೈಸಿಲ್ಲ ಎಂಬ ಕಾರಣ ಮುಂದಿಟ್ಟು 33 ಕುಟುಂಬಗಳ ಸದಸ್ಯರಿಗೆ ಸೂಚನಾ ಪತ್ರ ನೀಡಲಾಗಿದೆ ಎಂದು ಆರೋಪಿಸಿದರು.

ಈ ನಿಯಮದಿಂದ ಉದ್ಯೋಗಾವಕಾಶ ವಂಚಿತರಾಗಿರುವ 33 ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ, ಕರ್ನಾಟಕ ವಿದ್ಯುತ್ ನಿಗಮದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆಡಳಿತ ಮಂಡಳಿಯ ಸಾಮಾನ್ಯ ಸಭೆಗಳಲ್ಲಿ ಭೂಒಡೆತನದ ಅವಧಿಗೆ ಸಂಬಂಧಿಸಿದ ನಿಯಮವನ್ನು ಸಡಿಲಿಸುವ ಭರವಸೆ ನೀಡಿದ್ದರೂ, ಹಲವು ವರ್ಷಗಳು ಕಳೆದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯೋಗ ಸಿಗುವ ನಿರೀಕ್ಷೆಯಲ್ಲಿ ದೀರ್ಘಕಾಲದಿಂದ ಕಾಯುತ್ತಿರುವ ಕುಟುಂಬಗಳು ಆರ್ಥಿಕ ಹಾಗೂ ಕೌಟುಂಬಿಕ ಸಂಕಷ್ಟ ಎದುರಿಸುತ್ತಿವೆ. ಕೆಲ ಕುಟುಂಬಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಸಮಸ್ಯೆ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಸ್ಥಿತಿಯೂ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಭೂಮಿ ಕಳೆದುಕೊಂಡ ಕುಟುಂಬಗಳ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಭೂಒಡೆತನದ ಅವಧಿಗೆ ಸಂಬಂಧಿಸಿದ ಷರತ್ತನ್ನು ಸಡಿಲಿಸುವ ಮೂಲಕ ಅರ್ಹರಿಗೆ ಉದ್ಯೋಗ ಕಲ್ಪಿಸಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಭೂಸಂತ್ರಸ್ತ ಕುಟುಂಬಗಳೊಂದಿಗೆ ಬೀದಿಗಿಳಿದು ಧರಣಿ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ನಮ್ಮ ಹೋರಾಟ ಯಾರೊಂದಿಗೂ ಸಂಘರ್ಷ ನಡೆಸುವುದಕ್ಕಾಗಿ ಅಲ್ಲ. ಯೋಜನೆಗಾಗಿ ಕೃಷಿ ಭೂಮಿ ತ್ಯಾಗ ಮಾಡಿದ ಕುಟುಂಬಗಳಿಗೆ ಹಿಂದೆ ನೀಡಿದ್ದ ಉದ್ಯೋಗದ ಭರವಸೆ ಈಡೇರಿಸಿ ನ್ಯಾಯ ದೊರಕಿಸಿಕೊಡುವುದೇ ನಮ್ಮ ಉದ್ದೇಶ ಎಂದು ಕೆ. ಸತ್ಯನಾರಾಯಣರಾವ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಜಿ. ಪ್ರಭು, ಭೀಮಣ್ಣಗೌಡ, ಶರಣಪ್ಪಗೌಡ, ರಾಘವೇಂದ್ರ ಸಾಗರ, ತಿಮ್ಮಪ್ಪ ಹಾಗೂ ಬಸವ ಪ್ರಕಾಶ್ ರೆಡ್ಡಿ ಉಪಸ್ಥಿತರಿದ್ದರು.