ರಾಯಚೂರು, ಅ.1: ರಜಾ-ಈ-ಮುಸ್ತಫಾ ಎಜುಕೇಶನ್ ಟ್ರಸ್ಟ್‌ಗೆ ಸಂಬಂಧಿಸಿದ ವಿವಾದಿತ ಆಸ್ತಿಯ ಸ್ವಾಧೀನವನ್ನು ನ್ಯಾಯಾಲಯದ ಆದೇಶದಂತೆ ಹಸ್ತಾಂತರಿಸದಿದ್ದಲ್ಲಿ, ಕಾನೂನಿನ ಚೌಕಟ್ಟಿನಲ್ಲಿ ಆಸ್ತಿಯನ್ನು ಮರಳಿ ಪಡೆಯಲು ಅಗತ್ಯ ಕ್ರಮ ಅನುಸರಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರಸುಲ್ ಸಾಬ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್‌ನ ಆಸ್ತಿ ಹಾಗೂ ಅದರ ಹೆಸರಿನ ಬಳಕೆಗೆ ಸಂಬಂಧಿಸಿದ ವಿವಾದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಮೂಲ ದಾವೆ ಸಂಖ್ಯೆ 68/2010ರಲ್ಲಿ ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಆರ್‌ಎ ಸಂಖ್ಯೆ 47/2022ರಡಿ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಟ್ರಸ್ಟ್ ಡೀಡ್, ದಾನಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದ ಪ್ರಧಾನ ಜಿಲ್ಲಾ ನ್ಯಾಯಾಲಯವು, ಅಬ್ದುಲ್ ರಸುಲ್ ಸಾಬ್ ಮತ್ತು ಅವರ ಟ್ರಸ್ಟಿಗಳು ಸಂಬಂಧಿತ ಆಸ್ತಿಯ ಕಾನೂನುಬದ್ಧ ಮಾಲೀಕರು ಹಾಗೂ ಅನುಭೋಗದಾರರು ಎಂದು ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ಟ್ರಸ್ಟ್ ಹೆಸರಿನಲ್ಲಿ ನೋಂದಣಿಯಾಗಿರುವ ಟ್ರೇಡ್‌ಮಾರ್ಕ್ ಲೋಗೋ ಕೂಡ ತಮ್ಮ ಟ್ರಸ್ಟ್‌ಗೆ ಸೇರಿದ್ದು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಎದುರುದಾರರು ಹಾಗೂ ಅವರ ಬೆಂಬಲಿಗರ ವಶದಲ್ಲಿರುವ ಆಸ್ತಿಯ ಸ್ವಾಧೀನ ಮತ್ತು ಅನುಭೋಗವನ್ನು ಟ್ರಸ್ಟ್‌ಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಹೇಳಿದರು.

ರಜಾ-ಈ-ಮುಸ್ತಫಾ ಎಜುಕೇಶನ್ ಟ್ರಸ್ಟ್‌ನ್ನು 1994-95ರಲ್ಲಿ ತಮ್ಮನ್ನೂ ಒಳಗೊಂಡಂತೆ ಪ್ರಮುಖರು ನೋಂದಾಯಿಸಿದ್ದು, ಬಳಿಕ ಟ್ರಸ್ಟ್‌ನ ಲೋಗೋವನ್ನೂ ನೋಂದಣಿ ಮಾಡಿಸಲಾಗಿದೆ. ಟ್ರಸ್ಟ್‌ಗೆ ಸಂಬಂಧಿಸಿದ ಸರ್ವೆ ನಂ.126/2-AA/1ರ ಲಿಂಗಸುಗೂರು-ರಾಯಚೂರು ರಸ್ತೆಯ ಬಲಭಾಗದಲ್ಲಿರುವ ಜಮೀನನ್ನು ಖರೀದಿಸಲಾಗಿತ್ತು. 2008-09ರಲ್ಲಿ ತಮ್ಮ ಹೆಸರಿನಲ್ಲಿ ದಾನಪತ್ರ ಮಾಡಿಸಿಕೊಳ್ಳಲಾಗಿದ್ದು, ಆ ಸ್ಥಳದಲ್ಲಿ ಶಾಲೆ, ಕಾಲೇಜು, ಮದರಸ ಹಾಗೂ ಮಸೀದಿ ಸೇರಿದಂತೆ ವಿವಿಧ ಸಂಸ್ಥೆಗಳನ್ನು ನಡೆಸಿಕೊಂಡು ಬರಲಾಗಿದೆ ಎಂದು ವಿವರಿಸಿದರು.

ಟ್ರಸ್ಟ್‌ನ ಹೆಸರನ್ನು ಹೋಲುವ ಮತ್ತೊಂದು ಸಂಸ್ಥೆಯನ್ನು ರಚಿಸಿ, ಅದರ ಮೂಲಕ ತಮ್ಮ ಟ್ರಸ್ಟ್‌ಗೆ ಸೇರಿದ ಆಸ್ತಿಯನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಹಿರಿಯ ನ್ಯಾಯವಾದಿ ಮರಿಬಸನಗೌಡ ಅವರು ಜೀವಿತಾವಧಿಯಲ್ಲಿ ತಮ್ಮ ಪರ ಪ್ರಕರಣ ನಡೆಸಿದ್ದರು. ಸುಮಾರು 12 ವರ್ಷಗಳ ಕಾಲ ಕಾನೂನು ಹೋರಾಟ ಮುಂದುವರಿದಿದ್ದು, ಕೆಳ ನ್ಯಾಯಾಲಯದ ತೀರ್ಪಿನ ನಂತರ ಪ್ರಧಾನ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು.

ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನಿಗದಿತ ಅವಧಿಯೊಳಗೆ ಆಸ್ತಿಯ ಸ್ವಾಧೀನ ಹಾಗೂ ಅನುಭೋಗವನ್ನು ಹಸ್ತಾಂತರಿಸಬೇಕು. ಆದೇಶ ಪಾಲನೆಯಾಗದಿದ್ದರೆ ನ್ಯಾಯಾಲಯದ ಮೂಲಕವೇ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡು ಆಸ್ತಿಯ ಸ್ವಾಧೀನ ಪಡೆಯಲಾಗುವುದು ಎಂದು ಅಬ್ದುಲ್ ರಸುಲ್ ಸಾಬ್ ತಿಳಿಸಿದರು.

ಟ್ರಸ್ಟ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲ ಬಸನಗೌಡ ಕೊಪ್ಪರ್ ಮಾತನಾಡಿ, ನ್ಯಾಯಾಲಯದ ತೀರ್ಪಿನ ಅನ್ವಯ ಸಂಬಂಧಿತ ಆಸ್ತಿಯ ಸ್ವಾಧೀನ ಪಡೆಯಲು ಟ್ರಸ್ಟ್‌ಗೆ ಕಾನೂನುಬದ್ಧ ಹಕ್ಕಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಗೌಸ್ ಪಾಷಾ, ಅಬ್ದುಲ್ ಸಲೀಂ, ಮೊಹಮ್ಮದ್ ಶಾಹಿದ್, ಮಹಮ್ಮದ್ ರಜಾಕ್, ಮೌನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.