ಮಾನ್ವಿ: ಮಳೆ ಕೊರತೆಯಿಂದ ಎದುರಾಗಿರುವ ಸಂಕಷ್ಟ ನಿವಾರಣೆಯಾಗಿ ನಾಡಿನಲ್ಲಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ಪಟ್ಟಣದಲ್ಲಿ ಸರ್ವಧರ್ಮಗಳ ಧರ್ಮಗುರುಗಳ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಯಿತು.

ಪಟ್ಟಣದ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಆವರಣದಲ್ಲಿ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್, ಭಾರತೀಯ ಸೇವಾ ಸಮಿತಿ ಹಾಗೂ ಕನಸು ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬರದಂತಹ ಪರಿಸ್ಥಿತಿ ಎದುರಾಗಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಗಿ ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಲಾಗಿದ್ದು, ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಜನರ ಸಂಕಷ್ಟಗಳು ದೂರವಾಗಲಿ ಎಂದು ಶ್ರೀಗಳು ಆಶಿಸಿದರು.

ಶಾಸಕ ಹಂಪಯ್ಯ ನಾಯಕ ಮಾತನಾಡಿ, ಈ ಬಾರಿ ಮಳೆಗಾಲದಲ್ಲಿಯೂ ಬೇಸಿಗೆಯಂತಹ ಬಿಸಿಲಿನ ವಾತಾವರಣ ಕಂಡುಬಂದಿದೆ. ಹಿಂದಿನ ಕಾಲದಲ್ಲಿ ಇಂತಹ ಪರಿಸ್ಥಿತಿ ಎದುರಾದಾಗ ಹಿರಿಯರು ದೇವರ ಮೊರೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿತ್ತು. ಪ್ರಾರ್ಥನೆಯ ಬಳಿಕ ಉತ್ತಮ ಮಳೆಯಾದ ಅನೇಕ ಸಂದರ್ಭಗಳನ್ನೂ ಹಿರಿಯರು ಸ್ಮರಿಸುತ್ತಿದ್ದರು ಎಂದರು.

ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಹನುಮಂತ ಕೋಟೆ ಅವರು ಹಲವು ವರ್ಷಗಳಿಂದ ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಮಳೆಗಾಗಿ ವಿವಿಧ ಧರ್ಮಗಳ ಗುರುಗಳನ್ನು ಒಂದೇ ವೇದಿಕೆಗೆ ಕರೆತಂದು ಸಾಮೂಹಿಕ ಪ್ರಾರ್ಥನೆ ಆಯೋಜಿಸಿರುವುದು ವಿಶೇಷವಾಗಿದೆ. ನಾಡಿನಲ್ಲಿ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಹಾಗೂ ಜನರ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಶಾಸಕ ಹಂಪಯ್ಯ ನಾಯಕ ಆಶಿಸಿದರು.

ಸುವರ್ಣಗಿರಿ ಮಠದ ಶಂಕರಯ್ಯ ಸ್ವಾಮಿ, ಮುಸ್ಲಿಂ ಧರ್ಮಗುರು ಸೈಯದ್ ಖಮರುದ್ದೀನ್ ಖಾದ್ರಿ ಸಾಹೇಬ್, ದರ್ಗಾ ಸಜ್ಜಾದಾ ನಶೀನ್ ಹಜರತ್ ಸೈಯದ್ ಷಾ ಇರ್ಫಾನ್ ಖಾದ್ರಿ ಸಾಹೇಬ್, ಕವಿತಾಳ ಮೆಥೋಡಿಸ್ಟ್ ಚರ್ಚ್‌ನ ರೆವರೆಂಡ್ ಸೂರ್ಯದಾಸ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳು ಮಳೆ-ಬೆಳೆ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಹನುಮಂತ ಕೋಟೆ, ಬಾಲಸ್ವಾಮಿ ಕೊಡ್ಲಿ, ತಿಪ್ಪಣ್ಣ ಬಾಗಲವಾಡ, ಈರೇಶ ಹುಲುಗುಂಚಿ, ಸಾಹಿರಬಾನು, ಶರಣ ಮುದಂಗುಡ್ಡಿ, ಯೋಗೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.