ರಾಯಚೂರು, ಅ.10: ಅನಪೇಕ್ಷಿತ ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಕಾನೂನುಬದ್ಧ, ಸುರಕ್ಷಿತ ಹಾಗೂ ಗುಣಮಟ್ಟದ ಗರ್ಭಪಾತ ಸೇವೆಗಳು ದೊರೆಯುವುದು ಅತ್ಯಂತ ಅಗತ್ಯವಾಗಿದ್ದು, ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಗರ್ಭಪಾತ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಪುಂಡಲಿಕ ಗಂಜಿ ತಿಳಿಸಿದರು.
ಸುರಕ್ಷಿತ ಗರ್ಭಪಾತ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ಚಂದ್ರಬಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕಟ್ಲೆಟ್ಕೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ವೈದ್ಯರ ಸಲಹೆ ಹಾಗೂ ಮೇಲ್ವಿಚಾರಣೆಯಲ್ಲಿ ಔಷಧಗಳ ಮೂಲಕ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ ವೈದ್ಯರ ಸಲಹೆ ಪಡೆಯದೆ ಸ್ವಯಂ ನಿರ್ಧಾರದಿಂದ ಗರ್ಭಪಾತದ ಮಾತ್ರೆಗಳನ್ನು ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಆದ್ದರಿಂದ ಮಹಿಳೆಯರು ಅಧಿಕೃತ ಆರೋಗ್ಯ ಕೇಂದ್ರಗಳಲ್ಲಿಯೇ ಅಗತ್ಯ ವೈದ್ಯಕೀಯ ಸೇವೆ ಪಡೆಯಬೇಕು ಎಂದು ಸಲಹೆ ನೀಡಿದರು.
ಭಾರತದ ವೈದ್ಯಕೀಯ ಗರ್ಭಪಾತ ಕಾಯ್ದೆ (MTP Act) ಅಡಿಯಲ್ಲಿ ನಿಗದಿತ ಷರತ್ತುಗಳೊಂದಿಗೆ ಗರ್ಭಪಾತಕ್ಕೆ ಕಾನೂನಾತ್ಮಕ ಅವಕಾಶ ಕಲ್ಪಿಸಲಾಗಿದೆ. 2021ರ ತಿದ್ದುಪಡಿಯ ಬಳಿಕ 20 ವಾರಗಳವರೆಗಿನ ಗರ್ಭಧಾರಣೆಗೆ ಒಬ್ಬ ನೋಂದಾಯಿತ ವೈದ್ಯರ ಅಭಿಪ್ರಾಯ ಹಾಗೂ 20ರಿಂದ 24 ವಾರಗಳವರೆಗೆ ನಿರ್ದಿಷ್ಟ ವರ್ಗದ ಮಹಿಳೆಯರಿಗೆ ಇಬ್ಬರು ನೋಂದಾಯಿತ ವೈದ್ಯರ ಅಭಿಪ್ರಾಯದೊಂದಿಗೆ ಗರ್ಭಪಾತಕ್ಕೆ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ ಮಾತನಾಡಿ, ಗರ್ಭಪಾತ ಸೇವೆ ಪಡೆಯುವ ಮಹಿಳೆಯ ವೈಯಕ್ತಿಕ ಮಾಹಿತಿ ಮತ್ತು ಗುರುತಿನ ಗೌಪ್ಯತೆಯನ್ನು ಕಾನೂನಿನ ಪ್ರಕಾರ ಕಾಪಾಡಲಾಗುತ್ತದೆ. ಮಹಿಳೆಯರು ಯಾವುದೇ ಹಿಂಜರಿಕೆ ಅಥವಾ ಭಯವಿಲ್ಲದೆ ಅಧಿಕೃತ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದರು.
ಗರ್ಭಾವಸ್ಥೆಯ ಅವಧಿ ಹಾಗೂ ಮಹಿಳೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ನಂತರ ಯಾವ ವಿಧಾನ ಸೂಕ್ತ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ವೈದ್ಯರ ಶಿಫಾರಸು ಇಲ್ಲದೆ ಔಷಧಗಳನ್ನು ಸೇವಿಸುವುದು, ಅನಧಿಕೃತ ಚಿಕಿತ್ಸಾ ಕೇಂದ್ರಗಳಿಗೆ ತೆರಳುವುದು ಅಥವಾ ಮನೆಮದ್ದುಗಳನ್ನು ಅನುಸರಿಸುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ಗರ್ಭಪಾತದ ನಂತರವೂ ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾಗಿ ಸೇವಿಸುವುದು, ಅಗತ್ಯ ವಿಶ್ರಾಂತಿ ಪಡೆಯುವುದು ಹಾಗೂ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಮುಖ್ಯ. ಸರ್ಕಾರದಿಂದ ಅನುಮೋದಿತ ಆಸ್ಪತ್ರೆ ಅಥವಾ ಅರ್ಹ ವೈದ್ಯರ ಮಾರ್ಗದರ್ಶನದಲ್ಲಿಯೇ ಸುರಕ್ಷಿತ ಗರ್ಭಪಾತ ಸೇವೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ ಜಗತಾಪ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಯಶೋಧಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಧನಲಕ್ಷ್ಮೀ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು ಮತ್ತು ಪಾಲಕರು ಭಾಗವಹಿಸಿದ್ದರು.



