ರಾಯಚೂರು: ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ನಗರದ ನಿಜಲಿಂಗಪ್ಪ ನಗರದ ಸಾರ್ವಜನಿಕ ಸ್ಥಳಗಳು ಮತ್ತು ಉದ್ಯಾನವನಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

‘ಸ್ವಚ್ಛತಾ ಹೀ ಸೇವಾ’ ಹಾಗೂ ‘ಸ್ವಚ್ಛ ಭಾರತ’ ಅಭಿಯಾನದ ಆಶಯದೊಂದಿಗೆ ಎನ್‌ಎಸ್‌ಎಸ್ ಸ್ವಯಂಸೇವಕಿಯರು ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಿದರು.

ಇದೇ ವೇಳೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಜೀವಜಾಲದ ಮೇಲೆ ಉಂಟಾಗುವ ಹಾನಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ವಿಶೇಷವಾಗಿ ಏಕಬಳಕೆ ಪ್ಲಾಸ್ಟಿಕ್‌ನಿಂದ ದೂರವಿದ್ದು, ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಲಾಯಿತು.

ಎನ್‌ಎಸ್‌ಎಸ್ ಸ್ವಯಂಸೇವಕಿಯರಾದ ಮಹೇಶ್ವರಿ ಬಸವರಾಜ, ಸಂಗೀತಾ ವೆಂಕಟೇಶ ಹಾಗೂ ರೇಖಾ ಅವರ ನೇತೃತ್ವದಲ್ಲಿ ಜಮುನಾ, ಸ್ವಪ್ನಾ, ರೇಣುಕಾ, ರೂಪಾ, ತುಳಸಿ, ಅಂಬುಜಾ ಮತ್ತು ಸಂಗೀತಾ ವಿ. ಅವರು ಸ್ವಚ್ಛತಾ ಕಾರ್ಯ ಹಾಗೂ ಜನಜಾಗೃತಿ ಚಟುವಟಿಕೆಯಲ್ಲಿ ಪಾಲ್ಗೊಂಡರು.

ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಗಾಂಧೀಜಿಯವರ ಸ್ವಚ್ಛತೆಯ ಆಶಯವನ್ನು ಶ್ರಮದಾನದ ಮೂಲಕ ಸಾಕಾರಗೊಳಿಸುವ ಸಂದೇಶದೊಂದಿಗೆ ಗಾಂಧಿ–ಶಾಸ್ತ್ರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.