ರಾಯಚೂರು, ಅ.2: ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು, ತತ್ವ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರೇಖಾ ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಉಭಯ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ವಿದ್ಯಾಸಾಗರ್, ವೈ.ಕೆ. ಯಶೋಧ, ಪ್ರತಿಭಾ ಗೋನಾಳ್ ಹಾಗೂ ರಾಮಣ್ಣ ಬೊಯರ್ ಅವರು ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು.
ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಹೊಸ ದಿಕ್ಕು ನೀಡಿದರು. ಶಾಂತಿಯ ಮಾರ್ಗದಲ್ಲಿಯೇ ಹೋರಾಟ ನಡೆಸಿ ಸ್ವಾತಂತ್ರ್ಯ ಚಳವಳಿಗೆ ಜನಶಕ್ತಿಯನ್ನು ಒಗ್ಗೂಡಿಸಿದ ಅವರ ಚಿಂತನೆಗಳು ಇಂದಿಗೂ ಮಹತ್ವ ಕಳೆದುಕೊಂಡಿಲ್ಲ. ಜಗತ್ತಿನ ವಿವಿಧೆಡೆ ಸಂಘರ್ಷಗಳು ನಡೆಯುತ್ತಿರುವ ಸಂದರ್ಭದಲ್ಲಿ ಗಾಂಧೀಜಿಯವರ ಅಹಿಂಸಾ ಸಂದೇಶ ಮತ್ತಷ್ಟು ಪ್ರಸ್ತುತವಾಗಿದೆ. ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿರುವುದು ಅವರ ಚಿಂತನೆಗಳ ಜಾಗತಿಕ ಮಹತ್ವವನ್ನು ಸಾರುತ್ತದೆ ಎಂದು ರೇಖಾ ಪಾಟೀಲ ತಿಳಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸುವುದರ ಜೊತೆಗೆ, ಸ್ವಾತಂತ್ರ್ಯಾನಂತರವೂ ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸರಳತೆ, ಪ್ರಾಮಾಣಿಕತೆ ಮತ್ತು ದೇಶನಿಷ್ಠೆಯ ಮೂಲಕ ಅವರು ವಿಶಿಷ್ಟ ಗುರುತು ಮೂಡಿಸಿದ್ದಾರೆ. ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಜೀವನ ಮೌಲ್ಯಗಳನ್ನು ಯುವಜನತೆಗೆ ತಲುಪಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ತಾಯಪ್ಪ ಹೊಸೂರು, ಖಜಾಂಚಿ ನಾಗಪ್ಪ ಹೊರಪೇಟೆ, ದಂಡಪ್ಪ ಬಿರಾದಾರ್, ಶಾಂತ ಕುಲಕರ್ಣಿ, ವೈಶಾಲಿ ಪಾಟೀಲ, ಯಶೋದಾ, ವೀರೇಶ್ ಬಾಬು, ವಿಶ್ವನಾಥ ಶಾಸ್ತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



