ಮಟಮಾರಿ: ವಿದ್ಯಾರ್ಥಿಗಳು ಕೇವಲ ಉತ್ತಮ ಅಂಕ ಗಳಿಸುವುದಕ್ಕೆ ಸೀಮಿತರಾಗದೆ, ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸಾಬಣ್ಣ ಗಟ್ಟುಬಿಚ್ಚಾಲಿ ಹೇಳಿದರು.

ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಟೋಬರ್ 2 ದೇಶದ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ಗಾಂಧೀಜಿ ಸತ್ಯ ಮತ್ತು ಅಹಿಂಸೆಯನ್ನು ತಮ್ಮ ಹೋರಾಟದ ಪ್ರಮುಖ ಅಸ್ತ್ರಗಳನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕು ನೀಡಿದರು ಎಂದರು.

ಗಾಂಧೀಜಿಯವರ ಜೀವನದಿಂದ ವಿದ್ಯಾರ್ಥಿಗಳು ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮತ್ತು ಸ್ವಚ್ಛತೆಯ ಮಹತ್ವವನ್ನು ಅರಿತುಕೊಳ್ಳಬೇಕು. ತಮ್ಮ ಮನೆ, ಶಾಲೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ದ್ವೇಷದ ಬದಲು ಪ್ರೀತಿ ಮತ್ತು ಸೌಹಾರ್ದತೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮಕ್ಕೆ ಮಾದರಿಯಾಗಿದ್ದರು. ದೇಶ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ ತುಂಬಿದ ಅವರು, **‘ಜೈ ಜವಾನ್, ಜೈ ಕಿಸಾನ್’** ಎಂಬ ಘೋಷಣೆಯ ಮೂಲಕ ದೇಶ ಕಾಯುವ ಸೈನಿಕರು ಹಾಗೂ ಅನ್ನ ನೀಡುವ ರೈತರ ಮಹತ್ವವನ್ನು ಸಾರಿದರು ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಸತ್ಯನಿಷ್ಠೆ, ಸ್ವಚ್ಛತೆ ಮತ್ತು ದೇಶಪ್ರೇಮದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದಲ್ಲಿ ಪಡೆಯುವ ಅಂಕಗಳಷ್ಟೇ ಮುಖ್ಯವಲ್ಲ, ಬದುಕಿನಲ್ಲಿ ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಸಾಬಣ್ಣ ಗಟ್ಟುಬಿಚ್ಚಾಲಿ ಹೇಳಿದರು.

ಕಾರ್ಯಕ್ರಮದಲ್ಲಿ ಪ.ಪೂ. ಶ್ರೀ ಜ್ಞಾನಾನಂದ ಮಹಾರಾಜ್, ಬಸವರಾಜ್, ಶಿಕ್ಷಕರಾದ ವೀರೇಶ್, ಸಂಸ್ಕೃತ ಶಿಕ್ಷಕ ಭೋಜರಾಜ, ಶಿಕ್ಷಕಿಯರಾದ ಚೈತ್ರಾ, ಅನಿತಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.