ರಾಯಚೂರು, ಅ.1: ಜಿಲ್ಲೆಯ ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳಲ್ಲಿ ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಭೇಟಿ ನೀಡಿ ಪ್ರಗತಿ ಹಾಗೂ ಗುಣಮಟ್ಟ ಪರಿಶೀಲಿಸಿದರು.

ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ಸ್ವಚ್ಛ ಭಾರತ್ ಮಿಷನ್‌ನಡಿ ನಿರ್ಮಿಸಲಾಗುತ್ತಿರುವ ವೈಯಕ್ತಿಕ ಗೃಹ ಶೌಚಾಲಯಗಳನ್ನು ವೀಕ್ಷಿಸಿದ ಅವರು, ಕಾಮಗಾರಿಯ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ನೀರಲಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿಯಲ್ಲಿ ನಿರ್ಮಾಣ ಹಂತದಲ್ಲಿರುವ ಜಲಧಾರೆ ಕುಡಿಯುವ ನೀರಿನ ಟ್ಯಾಂಕ್ ಪರಿಶೀಲಿಸಿ, ಗುಣಮಟ್ಟದಲ್ಲಿ ರಾಜಿಯಾಗದೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಗುರುಗುಂಟ ಗ್ರಾಮದಲ್ಲಿರುವ ಘನ ತ್ಯಾಜ್ಯ ಹಾಗೂ ಮಲತ್ಯಾಜ್ಯ ವಿಲೇವಾರಿ ಘಟಕಗಳ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು. ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸ್ವಸಹಾಯ ಸಂಘದ ಮಹಿಳೆಯರೊಂದಿಗೆ ಮಾತನಾಡಿ, ತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ವಿಲೇವಾರಿ ಹಾಗೂ ಅವರಿಗೆ ಕಲ್ಪಿಸಿರುವ ಸುರಕ್ಷತಾ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ತ್ಯಾಜ್ಯ ಸಾಗಣೆ ವಾಹನದಲ್ಲಿ ಕುಳಿತು ಕಾರ್ಯವಿಧಾನವನ್ನು ಖುದ್ದಾಗಿ ಪರಿಶೀಲಿಸಿದರು. ಇದೇ ವೇಳೆ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು.

ದೇವದುರ್ಗ ತಾಲೂಕಿನ ಜೇರಬಂಡಿ ಗ್ರಾಪಂ ವ್ಯಾಪ್ತಿಯ ಕಮದಾಳ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ವೀಕ್ಷಿಸಿ, ಗ್ರಾಮಸ್ಥರಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ನೀರು ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಆಲಿಸಿದರು.

ಮಸರಕಲ್ ಗ್ರಾಮದ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿ ರಾಗಿ, ಗೋಧಿ, ಹೆಸರುಕಾಳು ಹಾಗೂ ನ್ಯೂಟ್ರಿಮಿಕ್ಸ್ ಸೇರಿದಂತೆ ಪೌಷ್ಟಿಕ ಆಹಾರ ಪದಾರ್ಥಗಳ ತಯಾರಿಕೆ, ಗುಣಮಟ್ಟ ಮತ್ತು ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಹಾರದ ಗುಣಮಟ್ಟ ಕಾಪಾಡಿ ಅಗತ್ಯವಿರುವ ಗ್ರಾಮಗಳಿಗೆ ಸಕಾಲದಲ್ಲಿ ಸರಬರಾಜು ಮಾಡುವಂತೆ ತಿಳಿಸಿದರು.

ನಂತರ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಎನ್‌ಆರ್‌ಎಲ್‌ಎಂನ ‘ಅಕ್ಕ ಕೆಫೆ’ಗೆ ಭೇಟಿ ನೀಡಿ, ಅದನ್ನು ನಿರ್ವಹಿಸುತ್ತಿರುವ ಸ್ವಸಹಾಯ ಗುಂಪಿನ ಮಹಿಳೆಯರೊಂದಿಗೆ ಚರ್ಚಿಸಿದರು. ಗ್ರಾಹಕರಿಗೆ ಶುಚಿ, ರುಚಿಕರ ಹಾಗೂ ಗುಣಮಟ್ಟದ ಆಹಾರ ಒದಗಿಸುವಂತೆ ಸಲಹೆ ನೀಡಿದರು.

ಬಳಿಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬಾಕಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಯೋಜನಾ ನಿರ್ದೇಶಕ ಶರಣಬಸವರಾಜ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ, ಕಾರ್ಯಪಾಲಕ ಅಭಿಯಂತರ ದೊರೆಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.