ರಾಯಚೂರು, ಅ.2: ಜಿಲ್ಲೆಗೆ ಅ.4ರಂದು ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಗುರುವಾರ ತಂಡದ ಭೇಟಿಗಾಗಿ ಆಯ್ಕೆ ಮಾಡಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪೂರ್ವಭಾವಿ ಪರಿಶೀಲನೆ ನಡೆಸಿದರು.
ಮುರ್ರಾನಪುರ, ಗಬ್ಬೂರು, ಎನ್. ಗಣೇಕಲ್, ಮಸರಕಲ್, ಯರಡೋಣ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬರ ಪರಿಸ್ಥಿತಿ ಹಾಗೂ ತಂಡದ ಪರಿಶೀಲನೆಗೆ ಸಂಬಂಧಿಸಿದ ಸಿದ್ಧತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೇಂದ್ರ ತಂಡದ ಭೇಟಿಯ ಸಂದರ್ಭದಲ್ಲಿ ಅಗತ್ಯ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸುವುದರ ಜೊತೆಗೆ, ಬರದಿಂದ ಉಂಟಾಗಿರುವ ಪರಿಸ್ಥಿತಿಯನ್ನು ವಿವರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಅಹಮ್ಮದ್ ಅಲಿ, ದೇವದುರ್ಗ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಅರಕೇರಾ ತಹಶೀಲ್ದಾರ್ ಅಮರೇಶ ಬಿರಾದಾರ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪೋಮ್ ಸಿಂಗ್, ದೇವದುರ್ಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗೇಂದ್ರ, ಅರಕೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ವೈ. ವಾಲ್ಮೀಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



