ರಾಯಚೂರು, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜನ್ಮದಿನಾಚರಣೆಯನ್ನು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಉಭಯ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಶಾಂತಪ್ಪ ಮಾತನಾಡಿ, ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆ ಹಾಗೂ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆ ಬೆಳೆಸಲು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ ಹಾಗೂ ದೃಢ ನಾಯಕತ್ವವನ್ನು ಸ್ಮರಿಸಿದ ಅವರು, ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಮೂಲಕ ಸೈನಿಕರು ಮತ್ತು ರೈತರ ಮಹತ್ವವನ್ನು ದೇಶಕ್ಕೆ ಸಾರಿದರು. ಯುವಜನತೆ ಹಾಗೂ ಕಾರ್ಯಕರ್ತರು ಈ ಮಹನೀಯರ ದೇಶಪ್ರೇಮ ಮತ್ತು ಸೇವಾ ಮನೋಭಾವವನ್ನು ಆದರ್ಶವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕೋಶಾಧ್ಯಕ್ಷ ಜಯವಂತರಾವ್ ಪತಂಗೆ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀದೇವಿ ನಾಯಕ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗಾಂಧೀಜಿ ಹಾಗೂ ಶಾಸ್ತ್ರಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ, ಜಿ. ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ತಾಯಣ್ಣ ನಾಯಕ, ರವಿ ಪಾಟೀಲ್, ಎನ್. ಶ್ರೀನಿವಾಸ ರೆಡ್ಡಿ, ಸುಧೀಂದ್ರ ಜಾಹಗೀರದಾರ, ಬಸವರಾಜ ಪಾಟೀಲ್ ಅತ್ತನೂರು, ರಮೇಶ ಯಾದವ, ಸೈಯದ್ ಫಯಾಜುದ್ದೀನ್, ರಾಣಿ ರಿಚರ್ಡ್, ಶಶಿಕಲಾ ಭೀಮರಾಯ, ಆರತಿ ಚಂದ್ರಶೇಖರ ಸೇರಿದಂತೆ ಪಕ್ಷದ ಮುಖಂಡರು, ಮಹಿಳಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.



