ರಾಯಚೂರು, ಅ.2: ದೇಶದ ಸ್ವಾತಂತ್ರ್ಯದ ಜತೆಗೆ ಸಾಮಾಜಿಕ ಪರಿವರ್ತನೆಗೂ ಮಹಾತ್ಮ ಗಾಂಧೀಜಿ ಆದ್ಯತೆ ನೀಡಿದ್ದರು. ಸತ್ಯ, ಅಹಿಂಸೆ, ಸಮಾನತೆ ಹಾಗೂ ನೈತಿಕ ಜಾಗೃತಿಯ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂಬುದು ಅವರ ಆಶಯವಾಗಿತ್ತು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಅಸ್ಪೃಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ, ಗ್ರಾಮ ಸ್ವರಾಜ್ಯ, ಮೂಲ ಶಿಕ್ಷಣ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಗಾಂಧೀಜಿ ಒತ್ತು ನೀಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕ ಪ್ರತಿಭಟನೆ ಮತ್ತು ನಾಗರಿಕ ಅಸಹಕಾರವನ್ನು ಪರಿಣಾಮಕಾರಿ ಹೋರಾಟದ ಮಾರ್ಗಗಳನ್ನಾಗಿ ಬಳಸಿದರು. ಚಂಪಾರಣ ಸತ್ಯಾಗ್ರಹ, ಅಸಹಕಾರ ಚಳವಳಿ ಹಾಗೂ ಉಪ್ಪಿನ ಸತ್ಯಾಗ್ರಹ ಅವರ ಹೋರಾಟದ ಪ್ರಮುಖ ಘಟ್ಟಗಳಾಗಿವೆ ಎಂದರು.
ಚರಕವನ್ನು ಸ್ವದೇಶಿ, ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯ ಹೋರಾಟದ ಸಂಕೇತವನ್ನಾಗಿ ಗಾಂಧೀಜಿ ರೂಪಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧೀಜಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ್ದರೂ ಅವರ ದೃಷ್ಟಿಕೋನ ಮತ್ತು ಮಾರ್ಗಗಳಲ್ಲಿ ಭಿನ್ನತೆಗಳಿದ್ದವು. ಸುಭಾಷ್ ಚಂದ್ರ ಬೋಸ್ ಅವರೊಂದಿಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವ ಹೊಂದಿದ್ದರು ಎಂದು ತಿಳಿಸಿದರು.
ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶ ಭಾರತದ ಗಡಿಗಳನ್ನು ಮೀರಿ ಜಗತ್ತಿನ ವಿವಿಧ ನಾಗರಿಕ ಹಕ್ಕುಗಳ ಹೋರಾಟಗಳ ಮೇಲೂ ಪ್ರಭಾವ ಬೀರಿದೆ. ಅವರ ಸರಳತೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳು ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಿ. ಭಾಸ್ಕರ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಜಿ.ಎಸ್. ಬಿರಾದಾರ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕ ಅನಿಲ್ ಅಪ್ರಾಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



