ರಾಯಚೂರು: ಡಾ. ನರಸಿಂಹಲು ನಂದಿನಿ ಸ್ಮಾರಕ ಶಿಕ್ಷಣ ಸಂಸ್ಥೆಯ ಸಂಚಾಲಿತ ನಂದಿನಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಹಾಗೂ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ರಾಂಪುರದ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು.

ಉಪಪ್ರಾಚಾರ್ಯ ಡಾ. ಬಿ. ವಿಜಯ ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದ ಹೋರಾಟವನ್ನು ವಿವರಿಸಿದರು. ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಧೈರ್ಯ, ಪ್ರಾಮಾಣಿಕತೆ ಹಾಗೂ ‘ಜೈ ಜವಾನ್, ಜೈ ಕಿಸಾನ್’ ಸಂದೇಶವನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಆಲಿಸ್ ಇ. ಜೋಸೆಫ್ ಮಾತನಾಡಿ, ಗಾಂಧೀಜಿಯವರ ಸರಳತೆ, ಶಿಸ್ತು, ಸೌಹಾರ್ದತೆ, ತ್ಯಾಗ ಮತ್ತು ಅಹಿಂಸಾತ್ಮಕ ಹೋರಾಟ ದೇಶದ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ದಿಕ್ಕು ನೀಡಿತು. ರಾಜಕೀಯ ಸ್ವಾತಂತ್ರ್ಯದೊಂದಿಗೆ ಸಾಮಾಜಿಕ ಸೌಹಾರ್ದತೆ ಮತ್ತು ಸರ್ವರ ಕಲ್ಯಾಣವೂ ಅವರ ಆಶಯವಾಗಿತ್ತು ಎಂದರು.

ಗಾಂಧೀಜಿ ಪ್ರತಿಪಾದಿಸಿದ ಮೂಲ ಶಿಕ್ಷಣದಲ್ಲಿ ಚಟುವಟಿಕೆ, ಪ್ರಾಯೋಗಿಕ ಕಲಿಕೆ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಮಹತ್ವವಿತ್ತು. ಶಿಕ್ಷಣವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗಬೇಕು ಎಂದು ತಿಳಿಸಿದರು. ಶಾಸ್ತ್ರಿಯವರ ಸರಳತೆ, ಸಜ್ಜನಿಕೆ ಮತ್ತು ನಾಯಕತ್ವದ ಗುಣಗಳು ಇಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ನಂದಿನಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಶೈಕ್ಷಣಿಕ ಸಲಹೆಗಾರ್ತಿ ರಾಜೇಶ್ವರಿ ಉಪಸ್ಥಿತರಿದ್ದರು. ಡಾ. ಬಿ. ವಿಜಯ ರಾಜೇಂದ್ರ ಕಾರ್ಯಕ್ರಮ ನಿರ್ವಹಿಸಿದರು.