ರಾಯಚೂರು, ಅ.3: ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಕ್ರೀಡಾ ಸ್ಪರ್ಶ ನೀಡುವ ನಿಟ್ಟಿನಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಪತ್ರಕರ್ತರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, 25 ವರ್ಷಗಳ ಪಯಣವನ್ನು ಪೂರೈಸಿರುವ ರಿಪೋರ್ಟರ್ಸ್ ಗಿಲ್ಡ್ ಪತ್ರಿಕೋದ್ಯಮದ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯೊಂದಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಉತ್ತಮ ಬೆಳವಣಿಗೆ. ಬೆಳ್ಳಿ ಮಹೋತ್ಸವವನ್ನು ಕ್ರೀಡೆ, ಆರೋಗ್ಯ ಹಾಗೂ ಸಮಾಜಸೇವೆಯಂತಹ ಚಟುವಟಿಕೆಗಳ ಮೂಲಕ ವಿಶೇಷವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.

ಪತ್ರಕರ್ತರ ನಡುವೆ ಸ್ನೇಹ, ಸಹಕಾರ ಮತ್ತು ಬಾಂಧವ್ಯ ವೃದ್ಧಿಸುವಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. ಸದಾ ಸುದ್ದಿಯ ಬೆನ್ನತ್ತುವ ಪತ್ರಕರ್ತರಿಗೆ ಕ್ರೀಡಾ ಚಟುವಟಿಕೆಗಳು ಹೊಸ ಉತ್ಸಾಹ ನೀಡುತ್ತವೆ ಎಂದು ಹೇಳಿದರು.

ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ರಾಯಚೂರಿನಲ್ಲಿ ನಡೆಯಲಿರುವ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನವನ್ನೂ ಎಲ್ಲರೂ ಒಗ್ಗಟ್ಟಿನಿಂದ ಯಶಸ್ವಿಗೊಳಿಸಬೇಕು. ಅದಕ್ಕೂ ಅಗತ್ಯ ಸಹಕಾರ ನೀಡುವುದಾಗಿ ಬೋಸರಾಜು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಬೆಳ್ಳಿ ಮಹೋತ್ಸವದ ನೆನಪಿಗಾಗಿ ವರ್ಷಪೂರ್ತಿ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯ ಪತ್ರಕರ್ತರನ್ನು ಒಂದೇ ವೇದಿಕೆಗೆ ತರುವ ಕ್ರೀಡಾಕೂಟಗಳ ಜೊತೆಗೆ ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಈ ಕಾರ್ಯಕ್ರಮಗಳ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪತ್ರಕರ್ತರ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದವು. ಹಿರಿಯ ಮತ್ತು ಕಿರಿಯ ಪತ್ರಕರ್ತರು ಒಂದೇ ವೇದಿಕೆಯಲ್ಲಿ ಸೇರಿದ್ದರಿಂದ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ಕಂಡುಬಂತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಶಾಂತಪ್ಪ, ಎಪಿಎಂಸಿ ಅಧ್ಯಕ್ಷ ಜಯವಂತರಾವ್ ಪತಂಗೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ್, ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ, ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರು, ನಿಕಟಪೂರ್ವ ಅಧ್ಯಕ್ಷ ಚನ್ನಬಸವಣ್ಣ, ಸದಸ್ಯರಾದ ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೋಮಿನ್ ಸೇರಿದಂತೆ ವಿವಿಧ ತಾಲೂಕುಗಳ ಪತ್ರಕರ್ತರು ಹಾಗೂ ಕ್ರಿಕೆಟ್ ತಂಡಗಳ ಆಟಗಾರರು ಉಪಸ್ಥಿತರಿದ್ದರು.