ರಾಯಚೂರು, ಅ.3: ನಗರದ ಮಿರಜ್ ಸಿನಿಮಾಸ್ ಚಿತ್ರಮಂದಿರದಲ್ಲಿ ತಿಂಡಿ-ತಿನಿಸು ಹಾಗೂ ಪಾನೀಯಗಳಿಗೆ ಹೆಚ್ಚಿನ ದರ ವಿಧಿಸಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ, ಚಿತ್ರಮಂದಿರದ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪಂಚಾಯತ್ ಕ್ಷೇತ್ರ ಚಿಕ್ಕಸೂಗೂರು ಅಧ್ಯಕ್ಷ ಸುರೇಶ ಬಾಬು ಆಗ್ರಹಿಸಿದರು.

ಈ ಕುರಿತು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಗಂಜ್ ರಸ್ತೆ ಹಾಗೂ ಬಸವನಭಾವಿ ವೃತ್ತದ ಸಮೀಪವಿರುವ ಮಿರಜ್ ಸಿನಿಮಾಸ್‌ನಲ್ಲಿ ಸಿನಿಮಾ ವೀಕ್ಷಣೆಗೆ ಬರುವ ಪ್ರೇಕ್ಷಕರಿಂದ ತಿಂಡಿ-ತಿನಿಸು ಮತ್ತು ಪಾನೀಯಗಳಿಗೆ ದುಬಾರಿ ದರ ಪಡೆಯಲಾಗುತ್ತಿದೆ ಎಂದು ದೂರಿದರು.

₹20 ಬೆಲೆಯ ಒಂದು ಲೀಟರ್ ನೀರಿನ ಬಾಟಲಿಗೆ ₹60, ಸಾಮಾನ್ಯವಾಗಿ ₹20ರಿಂದ ₹40 ಬೆಲೆಯ ಪಾಪ್‌ಕಾರ್ನ್‌ಗೆ ₹120 ಹಾಗೂ ₹10 ಬೆಲೆಯ ಸಮೋಸಾಕ್ಕೆ ₹50 ಪಡೆಯಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಹೊರಗಿನಿಂದ ತಂದ ತಿಂಡಿ-ತಿನಿಸು ಮತ್ತು ಪಾನೀಯಗಳನ್ನು ಚಿತ್ರಮಂದಿರದೊಳಗೆ ಕೊಂಡೊಯ್ಯಲು ಅವಕಾಶ ನೀಡುತ್ತಿಲ್ಲ ಎಂದು ಸುರೇಶ ಬಾಬು ದೂರಿದರು.

ಜಿಲ್ಲಾಡಳಿತ ಈ ಕುರಿತು ಸ್ಥಳ ಪರಿಶೀಲನೆ ನಡೆಸಿ, ಗ್ರಾಹಕರಿಂದ ಅನಧಿಕೃತವಾಗಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಚಿತ್ರಮಂದಿರದ ಪರವಾನಗಿ ರದ್ದುಗೊಳಿಸುವ ಕ್ರಮವನ್ನೂ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿಗೆ ಸ್ಪಂದಿಸದೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಡಳಿತ ಕಚೇರಿ ಹಾಗೂ ಮಿರಜ್ ಸಿನಿಮಾಸ್ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸುರೇಶ ಬಾಬು, ಕರ್ನಾಟಕ ಯುವ ಜಾಗೃತಿಯ ಬಾಬಾ ನಲಪಾಡ್, ಖಾಜಾ ಹುಸೇನ್, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಮತ್ತು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಾರುತಿ ಕಮತೋಳ್ ಉಪಸ್ಥಿತರಿದ್ದರು.