ರಾಯಚೂರು: ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಪ್ರಶಿಕ್ಷಣಾರ್ಥಿಗಳು ಪರಿಸರ ಸಂರಕ್ಷಣೆಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಹೇರೂರು ಚಂದ್ರಾಯಗೌಡ ಮಲ್ಹಾರ ಸಿದ್ದಪ್ಪಗೌಡ ಕರೆಡ್ಡಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಂಜುನಾಥ ಪಾಟೀಲ ವಟಗಲ್ ಕರೆ ನೀಡಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಹೇರೂರು ಚಂದ್ರಾಯಗೌಡ ಮಲ್ಹಾರ ಸಿದ್ದಪ್ಪಗೌಡ ಕರೆಡ್ಡಿ ಶಿಕ್ಷಣ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ದೇವದುರ್ಗ ತಾಲ್ಲೂಕಿನ ಗಬ್ಬೂರಿನ ಎಸ್‌ಎಲ್‌ಡಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನ ‘ಪರಿಸರ ಸಂರಕ್ಷಣೆಯಲ್ಲಿ ಪ್ರಶಿಕ್ಷಣಾರ್ಥಿಗಳ ಪಾತ್ರ’ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲದೇ ಹೊರತು ದುರಾಶೆಯನ್ನಲ್ಲ ಎಂಬ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ನಾವು ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಪ್ರಶಿಕ್ಷಣಾರ್ಥಿಗಳು ಇಂದಿನಿಂದಲೇ ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು” ಎಂದರು.

ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಗ್ರೀನ್ ರಾಯಚೂರು ಕಾರ್ಯದರ್ಶಿ ರಾಜೇಂದ್ರ ಶಿವಾಳಿ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ಮತ್ತು ಮಾಲಿನ್ಯದಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಪ್ರಶಿಕ್ಷಣಾರ್ಥಿಗಳು ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ನೀರನ್ನು ಮಿತವಾಗಿ ಬಳಸುವುದು, ಸಸಿಗಳನ್ನು ನೆಟ್ಟು ಪೋಷಿಸುವುದು ಸೇರಿದಂತೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಶಕ್ತಿ ಮತ್ತು ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಮಾಜದಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯ ಎಂದರು.

ಉಪನ್ಯಾಸಕ ಉತ್ತಪ್ಪ ಕೆ. ಮಾತನಾಡಿ, ತರಗತಿಯಿಂದ ಹೊರಡುವಾಗ ಅನಗತ್ಯವಾಗಿ ಉರಿಯುತ್ತಿರುವ ವಿದ್ಯುತ್ ದೀಪ ಹಾಗೂ ಫ್ಯಾನ್‌ಗಳನ್ನು ಆಫ್ ಮಾಡುವುದು, ನೀರನ್ನು ಪೋಲು ಮಾಡದಿರುವಂತಹ ಸಣ್ಣ ಅಭ್ಯಾಸಗಳಿಂದಲೂ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬಹುದು ಎಂದು ತಿಳಿಸಿದರು.

ಹಿರಿಯ ಉಪನ್ಯಾಸಕಿ ಶರಣಮ್ಮ ಮಾತನಾಡಿ, ವರ್ಷಕ್ಕೊಮ್ಮೆ ಸಸಿ ನೆಟ್ಟು ಫೋಟೊ ತೆಗೆಸಿಕೊಳ್ಳುವುದಕ್ಕಷ್ಟೇ ಪರಿಸರ ಕಾಳಜಿ ಸೀಮಿತವಾಗಬಾರದು. ನೆಟ್ಟ ಸಸಿಯನ್ನು ದತ್ತು ಪಡೆದು ಅದು ಮರವಾಗಿ ಬೆಳೆಯುವವರೆಗೆ ನೀರುಣಿಸಿ ಪೋಷಿಸುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು ಎಂದರು.

ಉಪನ್ಯಾಸಕಿ ಮಾಧುರಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮ ಭವಿಷ್ಯದ ಅಸ್ತಿತ್ವಕ್ಕೆ ಸಂಬಂಧಿಸಿದ ವಿಷಯವಾಗಿದೆ. ಪರಿಸರ ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದ್ದು, ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜನಾಧಿಕಾರಿ ಡಾ. ಸಿದ್ದರಾಮಯ್ಯ ಹಿರೇಮಠ, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಶಿಕುಮಾರ, ಉಪನ್ಯಾಸಕರಾದ ವೀರನಗೌಡ, ಹೇಮರೆಡ್ಡಿ ಪಾಟೀಲ, ಹಂಪಮ್ಮ, ಪ್ರವೀಣ ಕುಮಾರ, ಈರಪ್ಪ ಸರ್ಜಾಪುರ ಹಾಗೂ ಎನ್‌ಎಸ್‌ಎಸ್ ಶಿಬಿರದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.