ರಾಯಚೂರು, ಅ.4: ಪಂಡಿತ ತಾರಾನಾಥರು ವೈದ್ಯಕೀಯ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಸೇವೆ ಮತ್ತು ಸಾಧನೆ ಸದಾ ಸ್ಮರಣೀಯವಾಗಿದೆ ಎಂದು ಹುಬ್ಬಳ್ಳಿಯ ಹಿರಿಯ ಸಾಹಿತ್ಯ ವಿದ್ವಾಂಸ ಶ್ಯಾಮಸುಂದರ ಬಿದರಕುಂದಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಯಚೂರಿನ ವಿಶ್ವ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ಏಳು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಪಂಡಿತ ತಾರಾನಾಥರು ನಮ್ಮವರು ಎಂಬ ಹೆಮ್ಮೆ ರಾಯಚೂರಿನ ಜನತೆಗಿದೆ. ಅವರು ಸ್ಥಾಪಿಸಿದ ‘ಪ್ರೇಮಾಯತನ’ (ಪ್ರೇಮ ಆಶ್ರಮ)ದಲ್ಲಿನ ಆಯುರ್ವೇದ ಚಿಕಿತ್ಸಾಲಯದ ಮೂಲಕ ದೇಶ-ವಿದೇಶಗಳ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಅವರ ವೈದ್ಯಕೀಯ ಜ್ಞಾನ, ಸಾಹಿತ್ಯಾಸಕ್ತಿ ಮತ್ತು ಮಾನವೀಯ ಸೇವೆ ವಿಶಿಷ್ಟವಾಗಿತ್ತು ಎಂದು ತಿಳಿಸಿದರು.

ಪಂಡಿತ ತಾರಾನಾಥರಿಗೆ ಎಂಟು ಭಾಷೆಗಳ ಜ್ಞಾನವಿತ್ತು. ಉಪನಿಷತ್ತುಗಳು, ಕನ್ನಡ ವಚನಗಳು, ಕುರಾನ್, ಬೈಬಲ್ ಸೇರಿದಂತೆ ವಿವಿಧ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ಧರ್ಮ ಮತ್ತು ಮಾನವೀಯ ಮೌಲ್ಯಗಳ ಕುರಿತು ತಮ್ಮ ಬರವಣಿಗೆಯಲ್ಲಿ ವಿಚಾರಗಳನ್ನು ದಾಖಲಿಸಿದ್ದರು. ಅವರ ಬದುಕು ಮತ್ತು ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ‘ತುಂಗಭದ್ರೆಯ ಆಯುರ್ವೇದದಿಂದ ಆರೈಕೆಗೊಂಡ ದೇಶ-ವಿದೇಶಿಯರು’, ‘ರಾಯಚೂರು ಕೋಟೆಗೆ ನರಬಲಿ ಬಾಳೆ ಸಂಗಮ್ಮ ಮತ್ತು ಬಸರೆಡ್ಡಿ ಮಲ್ಲವ್ವ’, ‘ರಾಯಚೂರಿನ ಚಿತ್ರಕಲಾ ದಿಗ್ಗಜರು’, ‘ವಚನವರಲ್ಲಿ ಚುಟುಕುಗಳು’, ‘ಲಕ್ಷ್ಮೀದೇವಿ ಶಾಸ್ತ್ರಿ ಅವರ ಕಂಠದಲ್ಲುಳಿದ ಜನಪದಗಳು’, ‘ಸಂಶೋಧನಾ ಕೃಷಿಕ ದುರ್ಗಾ ಜಗದೀಶ್’ ಹಾಗೂ ‘ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರಮಾಲೆ–ಪಂಡಿತ ತಾರಾನಾಥ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಗದಗಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ ಯತಗಲ್ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಇತಿಹಾಸದಲ್ಲಿ ಬಹುತೇಕ ಪುರುಷರ ಸಾಧನೆಗಳನ್ನೇ ಮುನ್ನೆಲೆಗೆ ತರಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಿದ ಮಹಿಳೆಯರ ಕೊಡುಗೆಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಇತಿಹಾಸದ ಮರುಶೋಧನೆಯಿಂದ ಮಹಿಳೆಯರ ಮಹತ್ವದ ಪಾತ್ರಗಳು ಬೆಳಕಿಗೆ ಬರುತ್ತಿವೆ ಎಂದರು.

ದೇವಸ್ಥಾನ, ಕೋಟೆಗಳ ನಿರ್ಮಾಣದಿಂದ ಹಿಡಿದು ಸಮಾಜದ ಅಭಿವೃದ್ಧಿವರೆಗೆ ಮಹಿಳೆಯರು ಹಾಗೂ ಸೇವಕಿಯರು ಮಹತ್ವದ ಕೊಡುಗೆ ನೀಡಿದ್ದಾರೆ. ಇಂತಹ ಅಜ್ಞಾತ ಸಾಧಕಿಯರ ಬದುಕು ಮತ್ತು ಕೊಡುಗೆಗಳನ್ನು ಸಂಶೋಧನೆಯ ಮೂಲಕ ದಾಖಲಿಸುವ ಅಗತ್ಯವಿದೆ ಎಂದು ಹೇಳಿದರು.

ಹಿರಿಯ ಚಿತ್ರಕಲಾವಿದ ವಾಜಿದ್ ಸಾಜಿದ್ ‘ರಾಯಚೂರಿನ ಚಿತ್ರಕಲಾ ದಿಗ್ಗಜರು’ ಕೃತಿಯನ್ನು ಪರಿಚಯಿಸಿದರು. ಸಂಶೋಧನಾ ವಿದ್ವಾಂಸ ಡಾ. ಚನ್ನಬಸವಯ್ಯ ಹಿರೇಮಠ ಅವರು ‘ವಚನವರಲ್ಲಿ ಚುಟುಕುಗಳು’ ಹಾಗೂ ‘ಲಕ್ಷ್ಮೀದೇವಿ ಶಾಸ್ತ್ರಿ ಅವರ ಕಂಠದಲ್ಲುಳಿದ ಜನಪದಗಳು’ ಕೃತಿಗಳ ಕುರಿತು ಮಾತನಾಡಿದರು.

ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ್ ಅವರು ‘ಸಂಶೋಧನಾ ಕೃಷಿಕ ದುರ್ಗಾ ಜಗದೀಶ್’ ಹಾಗೂ ‘ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರಮಾಲೆ–ಪಂಡಿತ ತಾರಾನಾಥ’ ಕೃತಿಗಳನ್ನು ಪರಿಚಯಿಸಿದರು. ಲೇಖಕಿ ಲಕ್ಷ್ಮೀದೇವಿ ಶಾಸ್ತ್ರಿ ತಮ್ಮ ಕೃತಿಗಳ ರಚನೆಯ ಹಿನ್ನೆಲೆ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಮಾತನಾಡಿ, ಲೇಖಕರಿಗೆ ಒಂದು ಕೃತಿ ಪ್ರಕಟವಾದಾಗ ದೊರೆಯುವ ಸಂತೋಷವೇ ವಿಶಿಷ್ಟವಾದುದು. ಕಥೆ, ಕಾವ್ಯ, ನಾಟಕ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ಹೊರತರುವ ಸಾಹಿತಿಗಳು ಮತ್ತು ಲೇಖಕರಿಗೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಹಾಗೂ ಸೌಲಭ್ಯಗಳು ದೊರೆಯಬೇಕು ಎಂದರು.

ವೇದಿಕೆಯಲ್ಲಿ ಮ್ಯಾದಾರ ಲಲಿತಕಲಾ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಚ್. ಮ್ಯಾದರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ, ಗೌರವ ಕಾರ್ಯದರ್ಶಿ ರಾವುತರಾವ್ ಬರೂರ ಉಪಸ್ಥಿತರಿದ್ದರು.

ಬೆಂಗಳೂರಿನ ಇನ್ಫೋಸಿಸ್ ಹಿರಿಯ ಅಭಿಯಂತರ ವಿಶ್ವನಾಥ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ. ಗವಿಸಿದ್ದಪ್ಪ ಎಚ್. ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.

ಸಾಹಿತಿಗಳಾದ ವಿ.ಎನ್. ಅಕ್ಕಿ, ಅಯ್ಯಪ್ಪಯ್ಯ ಹುಡಾ, ಬಾಬು ಭಂಡಾರಿಗಲ್, ನಾಗಪ್ಪ ಹೊರಪ್ಯಾಟಿ, ದಾನಮ್ಮ ಸುಭಾಷ್ ಚಂದ್ರ, ಬಶೀರ ಅಹ್ಮದ್ ಹೊಸಮನಿ, ಈರಣ್ಣ ಬೆಂಗಾಲಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಾಹಿತಿಗಳು, ಲಕ್ಷ್ಮೀದೇವಿ ಶಾಸ್ತ್ರಿ ಅವರ ಕುಟುಂಬದ ಸದಸ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.