ರಾಯಚೂರು, ಅ.5: ನಗರದ ಬವನಬಾವಿ ವೃತ್ತಕ್ಕೆ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿ ಶ್ರೀಕೃಷ್ಣದೇವರಾಯ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮುನ್ನೂರುಕಾಪು ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ವಿವಿಧ ವೃತ್ತಗಳಿಗೆ ವಿವಿಧ ಸಮಾಜದ ಮಹನೀಯರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಅವರ ಜಯಂತಿ ದಿನಗಳಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಬವನಬಾವಿ ವೃತ್ತಕ್ಕೆ ಶ್ರೀಕೃಷ್ಣದೇವರಾಯರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀಕೃಷ್ಣದೇವರಾಯರು ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಆಡಳಿತಾವಧಿಯಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ, ಕೃಷಿ ಹಾಗೂ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳು ಅಭಿವೃದ್ಧಿ ಹೊಂದಿದ್ದವು. ಅವರ ಆಡಳಿತವನ್ನು ಇಂದಿಗೂ ಸುವರ್ಣಯುಗವೆಂದು ಸ್ಮರಿಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಶ್ರೀಕೃಷ್ಣದೇವರಾಯರ ಜಯಂತಿಯನ್ನು ಮುನ್ನೂರುಕಾಪು ಸಮಾಜದ ವತಿಯಿಂದ ಪ್ರತಿವರ್ಷ ಆಚರಿಸಲಾಗುತ್ತಿದೆ. ರಾಯಚೂರು ನಗರದ ಬವನಬಾವಿ ವೃತ್ತದಲ್ಲಿ ಶ್ರೀಕೃಷ್ಣದೇವರಾಯರ ಪ್ರತಿಮೆ ಸ್ಥಾಪಿಸಲು ಸಮಾಜವು ಕಳೆದ 10-12 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಬವನಬಾವಿ ವೃತ್ತಕ್ಕೆ ‘ಶ್ರೀಕೃಷ್ಣದೇವರಾಯ ವೃತ್ತ’ ಎಂದು ಅಧಿಕೃತವಾಗಿ ನಾಮಕರಣ ಮಾಡಿದಲ್ಲಿ, ಸಮಾಜದ ವತಿಯಿಂದ ಮೂರು ವರ್ಷಗಳೊಳಗೆ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಂದಿನ ಪೀಳಿಗೆಗೆ ಶ್ರೀಕೃಷ್ಣದೇವರಾಯರ ಆಡಳಿತ, ಸಾಧನೆ ಹಾಗೂ ಕೊಡುಗೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಸಮಾಜದ ಬೇಡಿಕೆಯನ್ನು ಪರಿಗಣಿಸಿ, ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡುವುದರ ಜೊತೆಗೆ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮುನ್ನೂರುಕಾಪು ಸಮಾಜದ ಮುಖಂಡರಾದ ಭಂಗಿ ಮುನಿರೆಡ್ಡಿ, ಜಿ. ವೆಂಕಟರೆಡ್ಡಿ, ಎ. ಆಶಾರೆಡ್ಡಿ, ಗೋಪಾಲರೆಡ್ಡಿ ಸೇರಿದಂತೆ ಸಮಾಜದ ಇತರ ಮುಖಂಡರು ಉಪಸ್ಥಿತರಿದ್ದರು.



