ಮಟಮಾರಿ: ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಸಂಕಷ್ಟದ ಸಂದರ್ಭಗಳಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ, ನಂಬಿಕಸ್ಥರೊಂದಿಗೆ ಸಮಸ್ಯೆಗಳನ್ನು ಹಂಚಿಕೊಂಡು ಸೂಕ್ತ ಸಮಾಲೋಚನೆ ಮತ್ತು ಮಾನಸಿಕ ನೆರವು ಪಡೆಯಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ ಕುಮಾರ ಹೇಳಿದರು.

ಮಟಮಾರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ಸೆ.10ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ. ಆತ್ಮಹತ್ಯೆ ತಡೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸುವುದು ಹಾಗೂ ಸಂಕಷ್ಟದಲ್ಲಿರುವವರಿಗೆ ಸಕಾಲದಲ್ಲಿ ನೆರವು ದೊರೆಯುವಂತೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಖಿನ್ನತೆ, ತೀವ್ರ ಒತ್ತಡ ಅಥವಾ ಆತ್ಮಹತ್ಯೆಯ ಆಲೋಚನೆಗಳ ಕುರಿತು ಮಾತನಾಡುವುದು ತಪ್ಪಲ್ಲ. ಇಂತಹ ಸಮಸ್ಯೆಗಳನ್ನು ಮುಚ್ಚಿಡದೆ ಕುಟುಂಬದ ಸದಸ್ಯರು, ಸ್ನೇಹಿತರು, ಶಿಕ್ಷಕರು ಅಥವಾ ಆರೋಗ್ಯ ತಜ್ಞರೊಂದಿಗೆ ಹಂಚಿಕೊಳ್ಳಬೇಕು. ಸಕಾಲಿಕ ಮಾತುಕತೆ, ಸಮಾಲೋಚನೆ ಹಾಗೂ ಮಾನಸಿಕ ಆರೋಗ್ಯ ನೆರವಿನಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯ ಎಂದರು.

ಹಿರಿಯ ಆರೋಗ್ಯ ನಿರೀಕ್ಷಕ ವಸಂತ ಮಾತನಾಡಿ, ಆತ್ಮಹತ್ಯೆಯ ಆಲೋಚನೆಗಳು ಬಹುತೇಕ ಸಂದರ್ಭಗಳಲ್ಲಿ ಏಕಾಏಕಿ ಕಾಣಿಸಿಕೊಳ್ಳುವುದಿಲ್ಲ. ವ್ಯಕ್ತಿಯ ಮಾತು, ನಡವಳಿಕೆ ಹಾಗೂ ದೈನಂದಿನ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳು ಕಂಡುಬರಬಹುದು. ಅವುಗಳನ್ನು ಕುಟುಂಬದವರು, ಸ್ನೇಹಿತರು ಹಾಗೂ ಶಿಕ್ಷಕರು ನಿರ್ಲಕ್ಷಿಸದೆ ಸೂಕ್ತವಾಗಿ ಸ್ಪಂದಿಸಬೇಕು ಎಂದರು.

ಇಷ್ಟದ ಕೆಲಸ ಅಥವಾ ಹವ್ಯಾಸಗಳಲ್ಲಿ ಹಠಾತ್ ಆಸಕ್ತಿ ಕಳೆದುಕೊಳ್ಳುವುದು, ನಿದ್ರೆಯ ಅಭ್ಯಾಸದಲ್ಲಿ ತೀವ್ರ ಬದಲಾವಣೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮದ್ಯ ಅಥವಾ ಮಾದಕ ವಸ್ತುಗಳ ಬಳಕೆ ಹೆಚ್ಚಾಗುವುದು, ಪ್ರೀತಿಯ ಅಥವಾ ಮೌಲ್ಯಯುತ ವಸ್ತುಗಳನ್ನು ಏಕಾಏಕಿ ಇತರರಿಗೆ ನೀಡುವುದು, ಪದೇಪದೇ ವಿದಾಯ ಹೇಳುವ ರೀತಿಯಲ್ಲಿ ಮಾತನಾಡುವುದು ಮುಂತಾದ ಬದಲಾವಣೆಗಳು ಕಂಡುಬಂದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ತಜ್ಞರ ನೆರವು ಪಡೆಯಬೇಕು ಎಂದು ತಿಳಿಸಿದರು.

ಆರೋಗ್ಯ ನಿರೀಕ್ಷಕ ಯೆಲ್ಲಾಲಿಂಗ ಮಾತನಾಡಿ, ಜೀವನದಲ್ಲಿ ಕಷ್ಟ-ಸುಖಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಒಂದು ಕ್ಷಣದ ನಿರ್ಧಾರದಿಂದ ಅಮೂಲ್ಯ ಜೀವನವನ್ನು ಕಳೆದುಕೊಳ್ಳಬಾರದು. ಒತ್ತಡ ಮತ್ತು ಸಮಸ್ಯೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳದೆ ನಂಬಿಕಸ್ಥರೊಂದಿಗೆ ಹಂಚಿಕೊಳ್ಳಬೇಕು. ಅಗತ್ಯವಿದ್ದಾಗ ಸಮಾಲೋಚನೆ ಪಡೆಯುವುದರಿಂದ ಸಂಕಷ್ಟದಿಂದ ಹೊರಬರಲು ಸಾಧ್ಯ ಎಂದು ಹೇಳಿದರು.

ಉಪನ್ಯಾಸಕರಾದ ಶಿವರಾಜ್ ಹಾಗೂ ವೀರೇಂದ್ರ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸುವಂತೆ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಅರವಿಂದ ಕುಮಾರ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು.

ಆಶಾ ಕಾರ್ಯಕರ್ತೆ ಸುಭದ್ರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಿಕಾ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.