ರಾಯಚೂರು. ಅ.. 5.(ಕರ್ನಾಟಕ ವಾರ್ತೆ):- ರಾಯಚೂರು ನಗರ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ಹಾಕದೆ ಶುಚಿತ್ವ ಕಾಪಾಡಿಕೊಳ್ಳದಿದ್ದರೆ ನಿವೇಶನದಾರರಿಗೆ ₹5,000 ದಿಂದ ₹50,000 ರೂ ವರೆಗೆ ಭಾರಿ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆಯಿಂದ ಸಾರ್ವಜನಿಕ ಪ್ರಕಟಣೆಯ ಮೂಲಕ ತೀವ್ರ ಎಚ್ಚರಿಕೆ ನೀಡಿದೆ.

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ-1976ರ ಕಲಂ 256, 257, 332, 333, 334 ಮತ್ತು 335 ರ ಅಡಿಯಲ್ಲಿ ಖಾಲಿ ಜಾಗಗಳಲ್ಲಿ ಅಶುಚಿತ್ವ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ದಂಡ ವಿಧಿಸಲು ಪಾಲಿಕೆಗೆ ಸಂಪೂರ್ಣ ಅಧಿಕಾರವಿದೆ. ಈ ಹಿಂದೆ 2025 ರ ನವೆಂಬರ್‌ನಲ್ಲೂ ಖಾಲಿ ನಿವೇಶನಗಳ ಸ್ವಚ್ಛತೆ ಕುರಿತು ಪಾಲಿಕೆಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು.

ನಿಯಮ ಮೀರಿದರೆ ಕಠಿಣ ಕ್ರಮ 7 ದಿನಗಳ ಗಡುವು ಈ ಪ್ರಕಟಣೆ ಹೊರಡಿಸಿದ 7 ದಿನಗಳ ಒಳಗಾಗಿ ನಿವೇಶನದಾರರು ತಮ್ಮ ಖಾಲಿ ಜಾಗಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆಯೇ ಯಂತ್ರೋಪಕರಣ ಹಾಗೂ ಸಿಬ್ಬಂದಿಯನ್ನು ಬಳಸಿ ಸ್ವಚ್ಛಗೊಳಿಸಲಿದೆ. ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ₹5,000 ದಿಂದ ₹50,000 ರೂ ವರೆಗೆ ದಂಡ ವಿಧಿಸಲಾಗುವುದು.

ಸ್ವಚ್ಛತಾ ವೆಚ್ಚದ ದುಪ್ಪಟ್ಟು ದಂಡ: ಪಾಲಿಕೆಯಿಂದ ಕೈಗೊಳ್ಳುವ ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಹಾಗೂ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಲೆಕ್ಕಹಾಕಿ, ಸದರಿ ವೆಚ್ಚದ ದುಪ್ಪಟ್ಟು ಮೊತ್ತವನ್ನು ನಿವೇಶನದ ಪಿ.ಐ.ಡಿ (PIಆ) ಸಂಖ್ಯೆಗೆ ದಂಡದ ರೂಪದಲ್ಲಿ ಸೇರಿಸಲಾಗುವುದು.

ತ್ಯಾಜ್ಯ ನಿರ್ವಹಣೆ ನಿಯಮಗಳು-2016 ನಿರ್ಮಾಣ ಮತ್ತು ಕಟ್ಟಡ ಕೆಡಹುವಿಕೆ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಶೇಖರಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ತೋಟಗಾರಿಕೆ ಮತ್ತು ಕೈತೋಟದ ತ್ಯಾಜ್ಯವನ್ನು ಪಾಲಿಕೆ ಸೂಚಿಸಿದ ಸ್ಥಳಗಳಲ್ಲೇ ವಿಲೇವಾರಿ ಮಾಡಬೇಕು. ಘನತ್ಯಾಜ್ಯವನ್ನು ರಸ್ತೆ ಬದಿ, ಬೀದಿಗಳಲ್ಲಿ, ತೆರೆದ ಸಾರ್ವಜನಿಕ ಸ್ಥಳಗಳಲ್ಲಿ, ಚರಂಡಿ, ನಾಲಾ ಹಾಗೂ ಜಲಕಾಯಗಳಲ್ಲಿ ಎಸೆಯುವುದು, ಸುಡುವುದು ಅಥವಾ ಹೂಳುವುದು ಸಂಪೂರ್ಣ ನಿಷೆದ್ಧವಾಗಿದೆ.

ಘನತ್ಯಾಜ್ಯ ನಿಯಮಗಳ ಉಲ್ಲಂಘನೆಯು ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ಗಂಭೀರ ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ದಂಡದ ಜೊತೆಗೆ ಕಾರಾಗೃಹವಾಸ (ಜೈಲು) ಶಿಕ್ಷೆಯೂ ವಿಧಿಸಲು ಅವಕಾಶವಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ನಿವೇಶನದಾರರು ತಕ್ಷಣವೇ ತಮ್ಮ ಖಾಲಿ ಜಾಗಗಳನ್ನು ಸ್ವಚ್ಛಗೊಳಿಸಿ ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ರಾಯಚೂರು ಮಹಾನಗರ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.