ರಾಯಚೂರು: ಎಚ್‌ಐವಿ–ಏಡ್ಸ್ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವ ಸಮುದಾಯದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಾಗೂ ರೆಡ್ ರಿಬ್ಬನ್ ಕ್ಲಬ್ (ಆರ್‌ಆರ್‌ಸಿ) ಘಟಕಗಳ ವತಿಯಿಂದ ನಗರದ ವಿವಿಧೆಡೆ ಫ್ಲ್ಯಾಶ್ ಮಾಬ್ ಮತ್ತು ಬೀದಿ ನಾಟಕ ಪ್ರದರ್ಶನ ನಡೆಸಲಾಯಿತು.

‘ಎಚ್‌ಐವಿ ಸೋಂಕು ಹರಡದಿರಲಿ–ಬಾಳು ಬಂಗಾರವಾಗಲಿ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಸಂತೋಷಕುಮಾರ ರೇವೂರ, ಎನ್‌ಎಸ್‌ಎಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ಘಟಕಗಳು ಪ್ರತಿ ಶೈಕ್ಷಣಿಕ ವರ್ಷದುದ್ದಕ್ಕೂ ಎಚ್‌ಐವಿ–ಏಡ್ಸ್, ಕ್ಷಯರೋಗ (ಟಿಬಿ) ಹಾಗೂ ಸ್ವಯಂಪ್ರೇರಿತ ರಕ್ತದಾನದ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ ಎಂದರು.

ಸಾರ್ವಜನಿಕರಿಗೆ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಸರಳ ಮತ್ತು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಬೀದಿ ನಾಟಕ ಹಾಗೂ ಫ್ಲ್ಯಾಶ್ ಮಾಬ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ವಯಂಸೇವಕಿಯರು ತಮ್ಮ ಪ್ರದರ್ಶನದ ಮೂಲಕ ಎಚ್‌ಐವಿ ಸೋಂಕಿನ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ದೂರಮಾಡಿ, ಯುವಜನರಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ನಗರದ ಕೇಂದ್ರ ಬಸ್ ನಿಲ್ದಾಣ, ಕಾಟಿ ದರ್ವಾಜಾ, ತೀನ್ ಕಂದೀಲು ವೃತ್ತ, ಉಸ್ಮಾನಿಯಾ ತರಕಾರಿ ಮಾರುಕಟ್ಟೆ, ಮಹಾವೀರ ವೃತ್ತ, ಭವಾನಿ ವೃತ್ತ ಹಾಗೂ ಭಂಗಿಕುಂಟಾ ಸೇರಿದಂತೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು ಫ್ಲ್ಯಾಶ್ ಮಾಬ್ ಮತ್ತು ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.

ಎಚ್‌ಐವಿ ಸೋಂಕು ಹರಡುವ ವಿಧಾನಗಳು, ಸೋಂಕು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳು, ಪರೀಕ್ಷೆ ಮತ್ತು ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು, ಸೋಂಕಿತರಿಗಾಗಿ ಇರುವ ಸರ್ಕಾರಿ ಸೌಲಭ್ಯಗಳು ಹಾಗೂ ಎಚ್‌ಐವಿ–ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ–2017ರಡಿ ದೊರೆಯುವ ರಕ್ಷಣೆಯ ಕುರಿತು ನಾಟಕ ಮತ್ತು ಜಾಗೃತಿ ಸಂದೇಶಗಳ ಮೂಲಕ ಮಾಹಿತಿ ನೀಡಲಾಯಿತು.

ಸ್ವಯಂಸೇವಕಿಯರಾದ ಭವಾನಿ, ಲಕ್ಷ್ಮೀ, ಸ್ವಪ್ನಾ ಹಾಗೂ ರೇಣುಕಾ ಡೊಳ್ಳು ವಾದ್ಯದಲ್ಲಿ ಭಾಗವಹಿಸಿದರೆ, ಸುಷ್ಮಾ, ಅನ್ನಪೂರ್ಣ, ಸಂಗೀತಾ ವೆಂಕಟೇಶ, ಜಮುನಾ, ಜಮುಲಮ್ಮ, ಮಹೇಶ್ವರಿ ಬಿ., ರೇಖಾ, ಜಯಶ್ರೀ, ತೇಜೇಶ್ವರಿ, ಅಂಬಿಕಾ, ರೂಪಾ, ತುಳಸಿ, ಅಂಬುಜಾ, ಸಂಗೀತಾ ವಿರೂಪಾಕ್ಷಿ ಸೇರಿದಂತೆ ವಿದ್ಯಾರ್ಥಿನಿಯರು ಪಾತ್ರಾಭಿನಯ ಮತ್ತು ಹಾಡುಗಾರಿಕೆಯ ಮೂಲಕ ಜಾಗೃತಿ ಮೂಡಿಸಿದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಸಂತೋಷಕುಮಾರ ರೇವೂರ ಕಾರ್ಯಕ್ರಮದುದ್ದಕ್ಕೂ ಉಪಸ್ಥಿತರಿದ್ದು ವಿದ್ಯಾರ್ಥಿನಿಯರ ತಂಡಕ್ಕೆ ಮಾರ್ಗದರ್ಶನ ನೀಡಿದರು.