ರಾಯಚೂರು: ಹಿಂದುಳಿದ ವರ್ಗಗಳಲ್ಲಿರುವ ಸಣ್ಣ ಹಾಗೂ ಅತಿ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮರ್ಪಕ ಪ್ರಾತಿನಿಧ್ಯ ಕಲ್ಪಿಸಲು ಓಬಿಸಿ ವರ್ಗದೊಳಗೆ ಒಳ ಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಮಗ್ರ ಹಾಗೂ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಆಗ್ರಹಿಸಿದರು.

ನಗರದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತು ಸುಮಾರು ಎಂಟು ದಶಕಗಳು ಕಳೆದರೂ ಹಿಂದುಳಿದ ವರ್ಗಗಳಲ್ಲಿರುವ ಅನೇಕ ಸಣ್ಣ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮಾನ ಅವಕಾಶ ಮತ್ತು ಸಮರ್ಪಕ ಪ್ರಾತಿನಿಧ್ಯ ದೊರೆತಿದೆಯೇ ಎಂಬುದನ್ನು ಅವಲೋಕಿಸಬೇಕಾಗಿದೆ ಎಂದರು.

ಹಿಂದುಳಿದ ವರ್ಗಗಳಲ್ಲಿಯೇ ಕೆಲವು ಸಮುದಾಯಗಳು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆದಿದ್ದರೆ, ಹಲವು ಸಣ್ಣ ಹಾಗೂ ಅತಿ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕು ಮತ್ತು ನ್ಯಾಯಯುತ ಅವಕಾಶಗಳಿಗಾಗಿ ಇಂದಿಗೂ ಹೋರಾಟ ನಡೆಸುವ ಪರಿಸ್ಥಿತಿ ಇದೆ. ಈ ಅಸಮಾನತೆಯನ್ನು ಸರಿಪಡಿಸಲು ಸರ್ಕಾರಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ವಿಶ್ವಕರ್ಮ, ಬಡಗಿ, ಅಕ್ಕಸಾಲಿಗ, ಕಂಬಾರ, ಕುಂಬಾರ, ಮಡಿವಾಳ, ನಾವಿಗ, ಹಡಪದ, ಅಗಸ, ಗಾಣಿಗ ಸೇರಿದಂತೆ ಹಲವು ಕಾಯಕ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಮೀಸಲಾತಿಯ ಪ್ರಯೋಜನ ಎಷ್ಟರ ಮಟ್ಟಿಗೆ ತಲುಪಿವೆ ಎಂಬುದನ್ನು ನಿಖರ ಅಂಕಿ-ಅಂಶಗಳ ಆಧಾರದಲ್ಲಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಓಬಿಸಿ ವರ್ಗದೊಳಗಿನ ಒಳ ಮೀಸಲಾತಿ ಕುರಿತು ಸಮಗ್ರ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಿ, ನಿಜವಾಗಿಯೂ ಹಿಂದುಳಿದಿರುವ ಸಣ್ಣ ಸಮುದಾಯಗಳಿಗೆ ನ್ಯಾಯಯುತ ಅವಕಾಶ ದೊರೆಯುವಂತೆ ಸಂವಿಧಾನಬದ್ಧ ಕ್ರಮ ಕೈಗೊಳ್ಳಬೇಕು. ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳಿಂದ ಯಾವ ಸಮುದಾಯಗಳಿಗೆ ಎಷ್ಟು ಪ್ರಯೋಜನ ದೊರೆತಿದೆ ಮತ್ತು ಯಾವ ಸಮುದಾಯಗಳು ಇನ್ನೂ ಅವಕಾಶಗಳಿಂದ ವಂಚಿತವಾಗಿವೆ ಎಂಬುದನ್ನು ಗುರುತಿಸಬೇಕು ಎಂದರು.

ಕೇವಲ ಘೋಷಣೆಗಳಿಂದ ಸಾಮಾಜಿಕ ನ್ಯಾಯ ಸಾಧಿಸಲು ಸಾಧ್ಯವಿಲ್ಲ. ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿತತೆ ಹಾಗೂ ವಾಸ್ತವಿಕ ಪರಿಸ್ಥಿತಿಯನ್ನು ಆಧರಿಸಿ ಪ್ರತಿಯೊಂದು ಹಿಂದುಳಿದ ಸಮುದಾಯಕ್ಕೂ ನ್ಯಾಯಯುತ ಅವಕಾಶ ಮತ್ತು ಪ್ರಾತಿನಿಧ್ಯ ದೊರೆಯುವ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಣ್ಣ ಹಾಗೂ ಅತಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಸಮೀಕ್ಷೆ, ಅಧ್ಯಯನ ಹಾಗೂ ಅಂಕಿ-ಅಂಶ ಸಂಗ್ರಹಕ್ಕೆ ಮುಂದಾಗಬೇಕು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಹಿಂದುಳಿದ ಪ್ರತಿಯೊಬ್ಬರಿಗೂ ಅವರ ಸ್ಥಿತಿಗತಿಗೆ ಅನುಗುಣವಾಗಿ ಅವಕಾಶ ಕಲ್ಪಿಸುವುದೇ ನಿಜವಾದ ಸಾಮಾಜಿಕ ನ್ಯಾಯ ಎಂದು ರಘು ಕೌಟಿಲ್ಯ ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ ದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ, ಕೆ.ಎಂ. ಪಾಟೀಲ್, ರಾಜಕುಮಾರ, ರಮಾನಂದ ಯಾದವ್, ಬಂಡೇಶ್ ಸೇರಿದಂತೆ ವಿವಿಧ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.