ರಾಯಚೂರು: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಪಿಂಜಾರ್-ನದಾಫ್ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೂಡಲೇ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಅಖಿಲ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಹಕ್ಕುಗಳ ಸಂಘದ ರಾಜ್ಯಾಧ್ಯಕ್ಷ ಇಮ್ರಾನ್ ಬಡೇಸಾಬ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು 35ರಿಂದ 40 ಲಕ್ಷ ಜನಸಂಖ್ಯೆ ಹೊಂದಿರುವ ಪಿಂಜಾರ್-ನದಾಫ್ ಸಮುದಾಯವು ಹಲವು ದಶಕಗಳಿಂದ ಸಾಮಾಜಿಕ ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಸಮುದಾಯದ ಬಹುತೇಕ ಕುಟುಂಬಗಳು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದಲ್ಲಿಯೂ ಹಿಂದುಳಿದಿವೆ ಎಂದು ಹೇಳಿದರು.
ಪಿಂಜಾರ್-ನದಾಫ್ ಸಮುದಾಯದವರು ಸಾಂಪ್ರದಾಯಿಕವಾಗಿ ಹತ್ತಿ ಹಾಗೂ ಅರಳೆಯಿಂದ ಗಾದಿ, ದಿಂಬು, ಜಮಖಾನ, ಗುಡಾರ ಮತ್ತು ಹಗ್ಗ ತಯಾರಿಸುವ ವೃತ್ತಿಯನ್ನು ಅವಲಂಬಿಸಿದ್ದರು. ಹಳ್ಳಿಯಿಂದ ಹಳ್ಳಿಗೆ ತೆರಳಿ ಗಾದಿ-ದಿಂಬು ತಯಾರಿಸುತ್ತಿದ್ದ ಕಾರಣ ಅಲೆಮಾರಿ ಸ್ವರೂಪದ ವೃತ್ತಿ ಸಮುದಾಯವಾಗಿಯೂ ಗುರುತಿಸಿಕೊಂಡಿದ್ದರು. ಆದರೆ ಆಧುನಿಕ ಬೆಡ್ ಹಾಗೂ ಇತರ ಉತ್ಪನ್ನಗಳ ಬಳಕೆ ಹೆಚ್ಚಾದಂತೆ ಸಾಂಪ್ರದಾಯಿಕ ವೃತ್ತಿ ಕ್ಷೀಣಿಸಿದ್ದು, ಅನೇಕ ಕುಟುಂಬಗಳು ಜೀವನೋಪಾಯದ ಸಂಕಷ್ಟಕ್ಕೆ ಸಿಲುಕಿವೆ ಎಂದು ವಿವರಿಸಿದರು.
1994ರಲ್ಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ-1ಕ್ಕೆ ಸೇರಿಸಲಾಗಿದೆ. ಆದರೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ಇಲಾಖೆಗಳ ನಡುವೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ತೆರಳಿದರೆ ಕೆಎಂಡಿಸಿಯಲ್ಲಿ ಸೌಲಭ್ಯ ಪಡೆಯುವಂತೆ ಹೇಳಲಾಗುತ್ತದೆ. ಕೆಎಂಡಿಸಿಯನ್ನು ಸಂಪರ್ಕಿಸಿದರೆ ಪ್ರವರ್ಗ-1ಕ್ಕೆ ಸೇರಿದ ಕಾರಣ ಹಿಂದುಳಿದ ವರ್ಗಗಳ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ಪ್ರಬಲ ನಾಯಕತ್ವದ ಕೊರತೆಯಿರುವ ಕಾರಣ ವಿವಿಧ ಸರ್ಕಾರಗಳು ತಮ್ಮ ಬೇಡಿಕೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ. ಸುಮಾರು 30 ವರ್ಷಗಳಿಂದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿಂಜಾರ್-ನದಾಫ್ ಸೇರಿದಂತೆ ಇತರ 13 ಜಾತಿಗಳನ್ನು ಒಳಗೊಂಡ ಅಭಿವೃದ್ಧಿ ನಿಗಮವನ್ನು 2023ರ ಮಾರ್ಚ್ 24ರಂದು ಘೋಷಿಸಿದ್ದರು. ಇತ್ತೀಚಿನ ಚಳಿಗಾಲದ ಅಧಿವೇಶನದಲ್ಲಿಯೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಪಿಂಜಾರ್-ನದಾಫ್ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಧ್ವನಿ ಎತ್ತಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ಸರ್ಕಾರದ ಗಮನಕ್ಕೂ ಸಮುದಾಯದ ಬೇಡಿಕೆಯನ್ನು ತರಲಾಗಿದೆ. ರಾಯಚೂರು ಜಿಲ್ಲೆಯ ಶಾಸಕರು ಹಾಗೂ ಸಚಿವರ ಮೂಲಕ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ಯುವಂತೆ ಮನವಿ ಮಾಡಿದ್ದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಶಾಸಕಿ ಜಿ. ಕರೆಮ್ಮ ನಾಯಕ ಅವರು ಮಾತ್ರ ಮನವಿಗೆ ಸ್ಪಂದಿಸಿ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಸಮುದಾಯದ ಸಮಸ್ಯೆಗಳು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯಿಂದ ₹45 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. 23 ಸದಸ್ಯರ ತಂಡವು ರಾಜ್ಯದ 25 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ, 2026ರ ಫೆ.20ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ತಿಳಿಸಿದರು.
ಈ ಅಧ್ಯಯನ ವರದಿಯನ್ನು ಆಧಾರವಾಗಿಟ್ಟುಕೊಂಡು ಪಿಂಜಾರ್-ನದಾಫ್ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸರ್ಕಾರ ಕೂಡಲೇ ಸ್ಥಾಪಿಸಬೇಕು. ಸಮುದಾಯದ ದೀರ್ಘಕಾಲದ ಬೇಡಿಕೆಗೆ ಮುಖ್ಯಮಂತ್ರಿ ಸ್ಪಂದಿಸಬೇಕು ಎಂದು ಇಮ್ರಾನ್ ಬಡೇಸಾಬ್ ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಸಮುದಾಯದ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸಿ ಬೆಂಬಲ ನೀಡುವ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಸಮುದಾಯ ಬೆಂಬಲ ನೀಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಖಾಸಿಂಬೀ, ಅಲ್ಲಾವುದ್ದೀನ್, ಶಾಲಾಮ್, ಜಾವೀದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



