ರಾಯಚೂರು: ಬರಗಾಲದ ಸಂಕಷ್ಟದ ನಡುವೆಯೇ ಎನ್‌ಆರ್‌ಬಿಸಿ ಕಾಲುವೆಯಲ್ಲಿ ಜಾರಿಯಲ್ಲಿರುವ ವಾರಬಂದಿ ಪದ್ಧತಿ ರೈತರಿಗೆ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದ್ದು, ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಸಿಗದೆ ಮೆಣಸಿನಕಾಯಿ ಬೆಳೆ ಒಣಗುವ ಆತಂಕ ಎದುರಾಗಿದೆ.

ಆರಕೇರಾ ತಾಲೂಕಿನ ಕರಡಿಗುಡ್ಡ ಗ್ರಾಮದ ರೈತರು ಎನ್‌ಆರ್‌ಬಿಸಿ ನೀರನ್ನೇ ಅವಲಂಬಿಸಿ ಬೆಳೆ ಬೆಳೆದಿದ್ದು, ವಾರಬಂದಿಯಿಂದಾಗಿ ಅಗತ್ಯ ಸಂದರ್ಭದಲ್ಲಿ ಸಮರ್ಪಕ ನೀರು ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಗ್ರಾಮದ ಯುವ ರೈತ ಚನ್ನಬಸವ ಅವರು ಸುಮಾರು 4 ಎಕರೆ ಪ್ರದೇಶದಲ್ಲಿ ‘ಸೂಪರ್-10’ ತಳಿಯ ಮೆಣಸಿನಕಾಯಿ ಬೆಳೆದಿದ್ದಾರೆ. ಬಿತ್ತನೆ, ಗೊಬ್ಬರ, ಔಷಧಿ ಸೇರಿದಂತೆ ಪ್ರತಿ ಎಕರೆಗೆ ಸುಮಾರು ₹40 ಸಾವಿರ ಖರ್ಚು ಮಾಡಿದ್ದು, ಇದೀಗ ನೀರಿನ ಕೊರತೆಯಿಂದ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿದೆ ಎಂದು ತಿಳಿಸಿದ್ದಾರೆ.

ಬರದ ಪರಿಸ್ಥಿತಿಯಲ್ಲಿ ಸಾಲ ಮಾಡಿ ಬೆಳೆ ಬೆಳೆದಿರುವ ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಕಾಲುವೆಯಲ್ಲಿ ವಾರಬಂದಿ ಜಾರಿಯಿಂದ ಬೆಳೆಗಳಿಗೆ ಅಗತ್ಯವಿರುವ ಸಮಯದಲ್ಲಿ ನೀರು ಸಿಗುತ್ತಿಲ್ಲ. ಇದರಿಂದ ಮೆಣಸಿನ ಗಿಡಗಳು ಒಣಗುವ ಭೀತಿ ಎದುರಾಗಿದ್ದು, ಹಾಕಿದ ಬಂಡವಾಳವೂ ಕೈಗೆ ಬಾರದ ಆತಂಕ ರೈತರನ್ನು ಕಾಡುತ್ತಿದೆ.

ಬೆಳೆ ನಿರ್ಣಾಯಕ ಹಂತದಲ್ಲಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ರೈತರ ಪರಿಸ್ಥಿತಿಯನ್ನು ಗಮನಿಸಿ ವಾರಬಂದಿ ನಿಯಮವನ್ನು ಸಡಿಲಿಸಬೇಕು. ಕನಿಷ್ಠ ಬೆಳೆ ಕೈಗೆ ಬರುವವರೆಗೂ ಎನ್‌ಆರ್‌ಬಿಸಿ ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಸಿ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಕರಡಿಗುಡ್ಡ ಗ್ರಾಮದ ರೈತರು ಒತ್ತಾಯಿಸಿದ್ದಾರೆ.