ರಾಯಚೂರು: ದೇವರಾಜು ಅರಸು ವಿಶೇಷ ವರ್ಗ ಯೋಜನೆಯಡಿ ನಿವೇಶನ ಕೋರಿ ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ನಡೆದು ಸುಮಾರು ಎರಡು ವರ್ಷ ಕಳೆದರೂ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸದೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅರ್ಹರಿಗೆ ಶೀಘ್ರ ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಯೋಜನೆಯಡಿ ವಿಧವೆಯರು, ಮನೆಗೆಲಸ ಮಾಡುವ ಮಹಿಳೆಯರು, ಅಂಗವಿಕಲರು, ತರಕಾರಿ ಹಾಗೂ ಬೀದಿ ವ್ಯಾಪಾರಿಗಳು, ವಿಧುರರು, ದೇವದಾಸಿ ಮಹಿಳೆಯರು, ಅಲೆಮಾರಿ ಸಮುದಾಯದವರು, ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರು ಸೇರಿದಂತೆ ವಿವಿಧ ವಿಶೇಷ ವರ್ಗಗಳಿಗೆ ಸೇರಿದವರು ನಿವೇಶನಕ್ಕಾಗಿ ಮಹಾನಗರ ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎರಡು ವರ್ಷ ಕಳೆದರೂ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ವಿಷಯವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಪ್ರಕ್ರಿಯೆಯನ್ನು ಚುರುಕುಗೊಳಿಸದಿರುವುದರಿಂದ ಅರ್ಹ ಫಲಾನುಭವಿಗಳು ಸರ್ಕಾರದ ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ವಿಧವೆ ಮಹಿಳೆಯರು ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸುವ ಪ್ರಕ್ರಿಯೆಯಲ್ಲಿಯೂ ವಿಳಂಬವಾಗಿದೆ ಎಂದು ಅವರು ದೂರಿದ್ದಾರೆ.
ಅರ್ಜಿಗಳ ವಿಲೇವಾರಿಯಲ್ಲಿ ಎರಡು ವರ್ಷ ವಿಳಂಬವಾಗಿರುವ ಕುರಿತು ಪರಿಶೀಲನೆ ನಡೆಸಿ, ಮಹಾನಗರ ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ದೇವರಾಜು ಅರಸು ವಿಶೇಷ ವರ್ಗದ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಅಗತ್ಯ ಭೂಮಿ ಮಂಜೂರು ಮಾಡಿ 15 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಬೇಡಿಕೆಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮನವಿಯಲ್ಲಿ ಅಧ್ಯಕ್ಷ ಜನಾರ್ಧನ್ ಹಳ್ಳಿಬೆಂಚಿ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಹೂಸೂರು, ಉಪಾಧ್ಯಕ್ಷರಾದ ಶರಣಬಸವ, ನೂರ್ ಜಾನ್, ರಾಜಶೇಖರ್, ಮಹೇಶ್ ಹಾಗೂ ಯುವ ಮುಖಂಡ ಎಸ್. ನಾಗರಾಜ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.



