ರಾಯಚೂರು ಅ. 06 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆವಹಿಸಲು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.
ಅಕ್ಟೋಬರ್ 06ರ ಮಂಗಳವಾರ ದಂದು ರಾಯಚೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿಗೆ ಕರೆದ ಜಿಲ್ಲಾ ದೌರ್ಜನ್ಯ ಪ್ರಕರಣ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆವಹಿಸಲು ದೌರ್ಜನ್ಯ ಪ್ರಕರಣಗಳ ತಾಲ್ಲೂಕು ನಿಯಂತ್ರಣ ಸಮಿತಿ ಸಮಿತಿ ಜಿಲ್ಲೆಯ ಆಯಾ ತಾಲ್ಲೂಕಿನ ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು ಇದರಲ್ಲಿ ಇರುವ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವುದರ ಜೊತೆಗೆ ಪ್ರತಿ ಬುಧವಾರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುತಿಸಲಾದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಗ್ರಾಮಗಳಲ್ಲಿ ಸಭೆ ನಡೆಸುವ ಮೂಲಕ ವಿವಿಧ ಸಮುದಾಯಗಳಲ್ಲಿ ಸೌಹಾರ್ದತೆ ಮೂಡಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯ ಯಾವುದೇ ಸ್ಥಳದಲ್ಲಿ ದೌರ್ಜನ್ಯ. ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಅಸ್ಪ್ಯಶತೆ ಆಚರಣೆಯಂತಹ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದರೆ ಈ ಕುರಿತು ತಕ್ಷಣ ಕ್ರಮವಹಿಸಬೇಕು. ಜಿಲ್ಲೆಯ ಯಾವುದೇ ಸಮಸ್ಯೆಗಳು ನಮಗಿಂತ ಮೊದಲು ಆಯಾ ತಾಲೂಕಿನ ಸಮಸ್ಯೆಗಳು ತಮಗೆ ಮೊದಲು ತಿಳಿಯುತ್ತವೆ. ಹಾಗಾಗಿ ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಪ್ರತಿ ಬುಧವಾರ ಈಗಾಗಲೇ ಗುರುತಿಸಿರುವ ಸೆನ್ಸಿಟಿವ್ ಹಳ್ಳಿಗಳಲ್ಲಿ ಆಯಾ ತಾಲೂಕಿನ ತಹಶಿಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಒಳಗೊಂಡ ಸಮಿತಿ ಸಭೆ ಪ್ರತಿವಾರ ನಡೆಸಿ ಸಭೆ ನಡೆಸಿದ ಮಾಹಿತಿ ನೀಡಬೇಕು. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರು ಮಾತನಾಡಿ ಕೆಲವು ತಿಂಗಳುಗಳಿAದ ಜಿಲ್ಲೆಯಲ್ಲಿ ಬಹಳ ದೌರ್ಜನ್ಯ ಪ್ರಕರಣಗಳು ಬಂದಿವೆ ಅವುಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆವಹಿಸುವುದರ ಜೊತೆಗೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಗ್ರಾಮಗಳೆಂದು ಗುರುತಿಸಿದ ಊರುಗಳಲ್ಲಿ ಸಭೆ ನಡೆಸಿ ವಿವಿಧ ಸಮುದಾಯಗಳು ಸೌಹಾರ್ದತೆಯಿಂದ ಇರುವಂತೆ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು. ಆಯಾ ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಂಗನವಾಡಿ, ಶೌಚಾಲಯ ಸೇರಿದಂತೆ ಇತರೆ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ಅಧಿಕಾರಿಗಳು ಹಾಸ್ಟೆಲ್ಗಳಿಗೆ ಭೇಟಿ ನೀಡಿ ಮಕ್ಕಳಿಗಾಗಿ ಸರಿಯಾಗಿ ಊಟ ಮತ್ತು ಉಪಹಾರ ನೀಡುತ್ತಿದ್ದಾರೆ ಎನ್ನುವ ಕುರಿತು ತಾವು ಹಾಸ್ಟೆಲಗಳಿಗೆ ಭೇಟಿ ನೀಡುತ್ತಿರುವುದಕ್ಕೆ ಅಭಿನಂದನೆಗಳು. ಅಧಿಕಾರಿಗಳು ಟೀಮ್ ಈ ರೀತಿಯಲ್ಲಿ ಕೆಲಸ ಮಾಡಿದಾಗ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಿದರು.
ರಾಯಚೂರು ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಮಾತನಾಡಿ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಬೇಕು. ಯಾವುದೇ ಸಮಸ್ಯೆಗಳಾದರೆ ಅವುಗಳನ್ನು ನಮ್ಮ ಗಮನಕ್ಕೆ ತಂದು ಅದರ ಪರಿಹಾರಕ್ಕಾಗಿ ಕ್ರಮ ವಹಿಸಬೇಕು. ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಅನಿಷ್ಠಾಗಳ ನಿರ್ಮೂಲನೆಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಅವರು ಮಾತನಾಡಿ, ಇಡೀ ರಾಜ್ಯದಲ್ಲಿ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ಎಸ್.ಸಿ., ಎಸ್ಟಿ ದೌರ್ಜನ್ಯ ಪ್ರಕರಣಗಳ ಕೇಸಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇವುಗಳು ನಡೆಯದಂತೆ ಮುಂಜಾಗ್ರತೆವಹಿಸಲು ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಎಸಿ, ಎಸ್ಟಿ ಸಮುದಾಯದ ನಾಯಕರನ್ನು ಕರೆಸಿ ಸಭೆಗಳನ್ನು ಮಾಡಲಾಗುತ್ತಿದೆ. ಅಧಿಕಾರಿಗಳು ವ್ಯಾಟ್ಸಫ್ ಗ್ರುಫ್ ಮಾಡಿ ಎಲ್ಲಿ ಘಟನೆ ನಡೆಯುತ್ತದೆ ಆ ಮಾಹಿತಿ ನಮಗೆ ತಕ್ಷಣ ತಲುಪಿಸಬೇಕು. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಸೂಚನೆಗಳನ್ನು ನಮ್ಮ ಪೊಲೀಸ್ ಇಲಾಖೆ ಪಾಲನೆ ಮಾಡುತ್ತದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಕೃಷ್ಣ ಶಾವಂತಗೇರಾ ಅವರು ದೌರ್ಜನ್ಯ ಪ್ರಕರಣಗಳ ತಾಲ್ಲೂಕು ಸಮಿತಿಯ ಕಾರ್ಯ ಚಟುವಟಿಕೆಗಳನ್ನು ಸಭೆಯಲ್ಲಿ ಸವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಲಿಂಗಸುಗೂರು ಸಹಾಯಕ ಆಯುಕ್ತರಾದ ನಾಗೇಂದ್ರ ಬಾಬು ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ಟಿ.ರೋಣಿ, ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಸಂತೋಷಿ ರಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.



